ಹೊಸದಿಲ್ಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಿಲ್ಲವೇ? ಕಳೆದ ಮೂರು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆ ಯುತ್ತಿರುವ ವಿದ್ಯಮಾನಗಳು ಈ ಪ್ರಶ್ನೆಗೆ ಉತ್ತರವೆಂಬಂತೆ ಪುಷ್ಟಿ ನೀಡುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಸೋನಿಯಾ ಪುತ್ರಿ ಪ್ರಿಯಾಂಕಾ ವಾದ್ರಾ ಅವರನ್ನು ಮುಂಚೂಣಿಗೆ ತರಬೇಕು ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಹೇಳಿದ್ದರು. ಅಲ್ಲದೆ ಮೊನ್ನೆಯಷ್ಟೇ ಚೀನ ರಾಯಭಾರಿಯನ್ನು ಭೇಟಿ ಮಾಡಿದ ವಿಚಾರದಲ್ಲಿ ಕಾಂಗ್ರೆಸ್ ಮುಜುಗರಕ್ಕೀಡಾಗಿ, ಹಿರಿಯರನ್ನೊಳಗೊಂಡ ಸಂವಹನ ತಂಡವನ್ನೂ ರಚಿಸಿತ್ತು. ಈ ಮೂಲಕ ರಾಹುಲ್ ಗಾಂಧಿ ಅಥವಾ ಪಕ್ಷದ ವಕ್ತಾರರು ಯಾವುದೇ ಹೇಳಿಕೆ ನೀಡಬೇಕಾದರೂ ಈ ಸಂವಹನ ತಂಡದ ಜತೆ ಚರ್ಚಿಸಬೇಕಾದದ್ದು ಅನಿವಾರ್ಯ ಎಂಬ ಸೂಚನೆಯನ್ನು ಪರೋಕ್ಷವಾಗಿ ತಲುಪಿಸಿದೆ. ಜತೆಗೆ ಬಿಹಾರ ಬಿಕ್ಕಟ್ಟಿನಲ್ಲಿ ರಾಹುಲ್ ಪ್ರವೇಶಕ್ಕೆ ಅನುಮತಿ ನೀಡದೆ, ಸೋನಿಯಾ ಅವರೇ ಮಧ್ಯಪ್ರವೇಶ ಮಾಡಿದ್ದೂ ಇದರ ಒಂದು ಭಾಗ ಎಂದು ಹೇಳಲಾಗಿದೆ. ಹೀಗಾಗಿ, ಅಕ್ಟೋಬರ್‌ನಲ್ಲಿ ರಾಹುಲ್‌ಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿದರೂ ಸಹ ಸೋನಿಯಾ ಗಾಂಧಿ ಅವರೇ ಕಿಂಗ್‌ಮೇಕರ್ ರೀತಿ ಇರಲಿದ್ದಾರೆ ಎಂದು ಹೇಳಲಾಗಿದೆ.
ಆಂಗ್ಲ ವಾಹಿನಿಯೊಂದರ ಪ್ರಕಾರ, 2019ರಲ್ಲಿ ರಾಹುಲ್ ಬದಲಾಗಿ ಸೋನಿಯಾ ಅವರೇ ಹಿರಿಯ ನಾಯಕರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಎದುರಿಸಬೇಕಾದರೆ, ವಿಪಕ್ಷಗಳ ಒಗ್ಗಟ್ಟು ಮತ್ತು ವರ್ಚಸ್ಸಿರುವ ನಾಯಕ ಬೇಕಾಗಿರುವುದು ಅವಶ್ಯ. ಇದೇ ಮಾತನ್ನು ಲಾಲು ಕೂಡ ಹೇಳಿದ್ದಾರೆ. ಹೀಗಾಗಿ ಸೋನಿಯಾ ಅವರೇ ಮುಂಚೂಣಿಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ದಿನಗಳ ಹಿಂದಷ್ಟೇ ಭಾರತ-ಚೀನ ನಡುವಿನ ಗಡಿ ತಂಟೆ ಬಗ್ಗೆ ಹೊಸದಿಲ್ಲಿಯಲ್ಲಿರುವ ಚೀನ ರಾಯಭಾರ ಕಚೇರಿಗೆ ಭೇಟಿ ನೀಡಿದ ಬಗ್ಗೆ ವಿವಾದ ಮೂಡಿದ್ದು, ಕಾಂಗ್ರೆಸ್‌ಗೆ ಮುಜುಗರ ತಂದಿದೆ. ಅಲ್ಲದೆ ಇದಕ್ಕೂ ಮುನ್ನವೇ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವೇಳೆ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ಹೋಗಿ, ಸಂಪೂರ್ಣವಾಗಿ ಈ ಚಟುವಟಿಕೆಯಿಂದ ದೂರವೇ ಉಳಿದಿದ್ದರು. ಇದೀಗ ಸೋನಿಯಾ ಅವರೇ ಮುತುವರ್ಜಿ ವಹಿಸಿ ಇತರಪಕ್ಷಗಳ ಜತೆ ಚರ್ಚಿಸಿ ಉಪರಾಷ್ಟ್ರಪತಿ ಅಭ್ಯರ್ಥಿಯನ್ನೂ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ರಾಹುಲ್ ಜತೆ ಚರ್ಚಿಸಿಲ್ಲ ಎಂದು ಹೇಳಲಾಗಿದೆ.
ಕಾಂಗ್ರೆಸ್‌ನ ಸಂವಹನ ಸಮಿತಿಯಲ್ಲಿ ಹಿರಿಯ ನಾಯಕರಾದ ಪಿ.ಚಿದಂಬರಂ, ಆನಂದ್ ಶರ್ಮಾ ಮತ್ತು ಗುಲಾಂ ನಬಿ ಆಜಾದ್ ಮುಂಚೂಣಿಯಲ್ಲಿದ್ದಾರೆ. ಒಟ್ಟಾರೆ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ನಾಯಕರೊಬ್ಬರು ‘ನ್ಯೂಸ್18’ಕ್ಕೆ ಹೇಳಿದ್ದು ಹೀಗೆ- ‘ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಸಲು ಪ್ರತಿಪಕ್ಷಗಳೆಲ್ಲ ಒಟ್ಟಾಗಿ ಬರಬೇಕು. ಕಾಂಗ್ರೆಸ್ ಒಂದರಿಂದಲೇ ಹೋರಾಡಲು ಸಾಧ್ಯವಿಲ್ಲ. ಅದಕ್ಕಾಗಿ ಪಕ್ಷಕ್ಕೆ ವರ್ಚಸ್ವೀ ನಾಯಕರು ಬೇಕು. ಉಪಾಧ್ಯಕ್ಷ ರಾಹುಲ್ ಗಾಂಧಿಯವರಲ್ಲಿ ಅದನ್ನು ಕಾಣಲಾಗುತ್ತಿಲ್ಲ’ ಎಂದಿದ್ದಾರೆ.
ಅಧ್ಯಕ್ಷ ಮಾತ್ರ: ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿದರೂ 2019ರ ಚುನಾವಣೆಯಲ್ಲಿ ಅವರೇ ಮುಖ್ಯ ಭೂಮಿಕೆಯಲ್ಲಿರುವುದಿಲ್ಲ. ಹೆಸರು ಬಹಿರಂಗಪಡಿಸಲಿಚ್ಛಿಸದ ಕಾಂಗ್ರೆಸ್‌ನ ಹಿರಿಯ ನಾಯಕರು 2004ರ ಸ್ಥಿತಿಗೂ 2017ರ ಸ್ಥಿತಿಗೂ ವ್ಯತ್ಯಾಸವಿದೆ. ಆ ಸಂದರ್ಭದಲ್ಲಿ ಮೋದಿ ಅಲೆ ದೇಶಾದ್ಯಂತ ಇರಲಿಲ್ಲ. ಸದ್ಯ ಪ್ರಾದೇಶಿಕ ಪಕ್ಷಗಳೇ ಮುಂಚೂಣಿಯಲ್ಲಿವೆ ಎಂದಿದ್ದಾರೆ.