Advertisement

ರಾಹುಲ್‌ ಉಡುಪಿ ಜಿಲ್ಲೆ  ಸಮಗ್ರ ಭೇಟಿ ‘ಕೈ’ತಪ್ಪಿತೇಕೆ? 

09:30 AM Mar 20, 2018 | Team Udayavani |

ಉಡುಪಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಕೈಗೊಳ್ಳಲಿದ್ದ ಪ್ರವಾಸ ಕೊನೆಯ ಕ್ಷಣದಲ್ಲಿ ಬದಲಾವಣೆಯಾಗಿ ಈಗ ಉಡುಪಿ ಜಿಲ್ಲೆಯ ಒಂದು ಪಾರ್ಶ್ವಕ್ಕೆ ಮಾತ್ರ ಸೀಮಿತಗೊಂಡಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಆಯಾಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ. 

Advertisement

ಪಕ್ಷದ ಮೂಲಗಳ ಪ್ರಕಾರ ರಾಹುಲ್‌ ಗಾಂಧಿಯವರು ಕಾರವಾರದಲ್ಲಿ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಅರೆಶಿರೂರು ಹೆಲಿಪ್ಯಾಡ್‌ ಮೂಲಕ ಕೊಲ್ಲೂರು, ಬ್ರಹ್ಮಾವರ, ಉಡುಪಿ ಮಾರ್ಗವಾಗಿ ಪಡುಬಿದ್ರಿ, ಮಂಗಳೂರಿಗೆ ತೆರಳುವುದು ಈ ಹಿಂದೆ ನಿಗದಿಯಾಗಿದ್ದ ಕಾರ್ಯಕ್ರಮ. ಆದರೆ ಕಾರವಾರದ ಸಭೆ ರದ್ದಾದುದರಿಂದ ಉಳಿದೆಲ್ಲ ಕಾರ್ಯಕ್ರಮಗಳೂ ರದ್ದಾಗಿವೆ. ಚುನಾವಣೆ ಘೋಷಣೆಯಾದ ಬಳಿಕ ರಾಹುಲ್‌ ಮತ್ತೆ ಉಡುಪಿ, ದ.ಕ. ಜಿಲ್ಲೆಗೆ ಬರುವ ಸಾಧ್ಯತೆ ಇದೆ. ಈಗ ಭೇಟಿ ನೀಡದ ಸ್ಥಳಗಳಿಗೆ ಆ ಸಂದರ್ಭದಲ್ಲಿ ಭೇಟಿ ಕೊಡುವರು ಎನ್ನಲಾಗಿದೆ. 

ರಾಹುಲ್‌ ಗಾಂಧಿಯವರ ತಂದೆ ರಾಜೀವ್‌ ಗಾಂಧಿಯವರು ಉಡುಪಿಗೆ ಭೇಟಿ ನೀಡಿದ್ದರು. ಇದು ಪ್ರಾಯಃ 1983ರಲ್ಲಿ. ಆಗ ಉಡುಪಿ ರಥಬೀದಿಯಲ್ಲಿ ಸಾರ್ವಜನಿಕ ಸಭೆ ನಡೆಯುತ್ತಿತ್ತು. ರಾತ್ರಿ 11 ಗಂಟೆಗೆ ರಾಜೀವ್‌ ಅವರು ಭಾಷಣ ಮಾಡಿ 1 ಗಂಟೆಗೆ ಕಾಪುವಿಗೆ ತೆರಳಿ ಭಾಷಣ ಮಾಡಿದ್ದರು. ಅದೇ ಸ್ಥಳದಲ್ಲಿ ರಾಜೀವ ಭವನವನ್ನು ನಿರ್ಮಿಸಲಾಗಿದೆ. 1980ರ ದಶಕದಲ್ಲಿ ಅವರು ಪ್ರಧಾನಿಯಾಗಿದ್ದಾಗ ಭೇಟಿ ನೀಡುವುದೆಂದು ನಿಗದಿಯಾಗಿದ್ದರೂ ಕೊನೆ ಕ್ಷಣದಲ್ಲಿ ಭದ್ರತೆ ಕಾರಣಕ್ಕೆ ರದ್ದಾಗಿತ್ತು. 

ಇಂದಿರಾ ಗಾಂಧಿಯವರು ನಾಲ್ಕೈದು ಬಾರಿ ಉಡುಪಿಗೆ ಆಗಮಿಸಿದ್ದರು. 1972ರ ಭೇಟಿ ಅವಧಿಯಲ್ಲಿ ಅದಮಾರು ಮಠದ ಶ್ರೀ ವಿಬುಧೇಶತೀರ್ಥರ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಉಡುಪಿಯ ಖಾದ್ಯವನ್ನು ಸವಿದು ಖುಷಿಪಟ್ಟಿದ್ದರು. ಅನಂತರ 1977ರಲ್ಲಿ ಟಿ.ಎ. ಪೈಯವರು ಚುನಾವಣೆಗೆ ನಿಂತಿದ್ದಾಗ, ಬಳಿಕ ಮಣಿಪಾಲದ ಆಸ್ಪತ್ರೆಯ ಕಾರ್ಯಕ್ರಮ, 1980ರ ಅವಧಿಯಲ್ಲಿ ಒಮ್ಮೆ ಭೇಟಿ ನೀಡಿದ್ದರು. ಇಂದಿರಾ ಗಾಂಧಿಯವರು ಪೇಜಾವರ ಶ್ರೀಗಳಿಗೆ ನಿಕಟ ಸಂಪರ್ಕ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next