Advertisement

Flying Kiss ; ಸಂಸತ್ ನಲ್ಲಿ ರಾಹುಲ್ ಗಾಂಧಿ ವರ್ತನೆ ಕುರಿತು ಆಕ್ರೋಶ

04:01 PM Aug 09, 2023 | Team Udayavani |

ಹೊಸದಿಲ್ಲಿ: ”ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಅವಿಶ್ವಾಸ ಗೊತ್ತುವಳಿ ಮಂಡನೆ ಬಳಿಕ ಸಂಸತ್ತಿನಿಂದ ಹೊರಹೋಗುವಾಗ ‘ಫ್ಲೈಯಿಂಗ್ ಕಿಸ್’ ಸನ್ನೆ ಮಾಡುವ ಮೂಲಕ ಸದನದ ಘನತೆಗೆ ಕುಂದು ಉಂಟು ಮಾಡಿದ್ದಾರೆ” ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮೃತಿ ಇರಾನಿ ”ಮಹಿಳಾ ಸಂಸದರು ಕುಳಿತಿರುವ ಸಂಸತ್ತಿನಲ್ಲಿ ಸ್ತ್ರೀದ್ವೇಷವಿರುವ ಪುರುಷ ಮಾತ್ರ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಅವರ ವರ್ತನೆ ಘನತೆಯನ್ನು ಕುಗ್ಗಿಸಿದೆ ” ಎಂದು ಬುಧವಾರ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ವರ್ತನೆಯನ್ನು ಉಲ್ಲೇಖಿಸಿ ಕಿಡಿ ಕಾರಿದ್ದಾರೆ.

ಸಂಸತ್ತಿನಲ್ಲಿ ಪುರುಷನೊಬ್ಬನ “ಸ್ತ್ರೀದ್ವೇಷದ ನಡವಳಿಕೆ” ಹಿಂದೆಂದೂ ಗೋಚರಕ್ಕೆ ಬಂದಿರಲಿಲ್ಲ. ಜನರ ಸದನ – ಮಹಿಳೆಯರ ಘನತೆಯನ್ನು ಕಾಪಾಡಲು ಕಾನೂನುಗಳನ್ನು ರಚಿಸಿದಾಗ, ಅಧಿವೇಶನದ ಅವಧಿಯಲ್ಲಿ ಸ್ತ್ರೀದ್ವೇಷಕ್ಕೆ ಸಾಕ್ಷಿಯಾಗಿದೆ, ಅವರನ್ನು ತರಾಟೆಗೆ ತೆಗೆದುಕೊಳ್ಳಬೇಕೇ?” ಎಂದು ಪ್ರಶ್ನಿಸಿದರು.

”ಮಹಿಳೆಯರನ್ನು ಅವಮಾನಿಸಿದ್ದಾರೆ” ಎಂದು ಆಪಾದಿತ ಹಾವಭಾವದ ಬಗ್ಗೆ ಆರೋಪಿಸಿ ಬಿಜೆಪಿ ಮಹಿಳಾ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ”ಸದನದಲ್ಲಿ ಸಂಸದರೊಬ್ಬರ ಇಂತಹ ವರ್ತನೆಯನ್ನು ನಾವು ನೋಡಿದ್ದು ಇದೇ ಮೊದಲು. ಸದನದಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡುವ ಸನ್ನೆ ಮಾಡಿದರು.ಇದನ್ನು ಒಪ್ಪಲಾಗದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ದೂರು ನೀಡಿದ್ದೇವೆ” ಎಂದು ಹೇಳಿದ್ದಾರೆ.

Advertisement

ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ

ಲೋಕಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ”ಬಿಜೆಪಿ ಮಣಿಪುರದಲ್ಲಿ ಭಾರತವನ್ನು ಹತ್ಯೆಗೈದಿದೆ ಮತ್ತು ಈಗ ಹರಿಯಾಣಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಭಾರತವು ಒಂದು ಧ್ವನಿ, ಹೃದಯದ ಧ್ವನಿ, ನೀವು ಮಣಿಪುರದಲ್ಲಿ ಆ ಧ್ವನಿಯನ್ನು ಹತ್ಯೆಗೈದಿದ್ದೀರಿ, ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ. ನೀವು ದೇಶದ್ರೋಹಿಗಳು, ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ, ಇನ್ನೊಂದು ತಾಯಿ, ಭಾರತ್ ಮಾತಾ, ನೀವು ಅವಳನ್ನು ಮಣಿಪುರದಲ್ಲಿ ಕೊಂದಿದ್ದೀರಿ, ಅದಕ್ಕಾಗಿಯೇ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುವುದಿಲ್ಲ, ನೀವು ಭಾರತ ಮಾತೆಯ ರಕ್ಷಕರಲ್ಲ, ನೀವು ಅವಳ ಹಂತಕರು” ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next