ಬೆಂಗಳೂರು: ಎಚ್ ಎಎಲ್ ಕೇವಲ ಕಂಪನಿ ಮಾತ್ರವಲ್ಲ. ಇದು ದೇಶದ ಶಕ್ತಿ. ಇಲ್ಲಿಗೆ ಬಂದು ಮಾತನಾಡುವುದು ನನಗೆ ಹೆಮ್ಮೆಯ ವಿಷಯವಾಗಿದೆ. ದೇಶದ ವೈಮಾನಿಕ ಕ್ಷೇತ್ರದಲ್ಲಿ ಎಚ್ ಎಎಲ್ ಕೊಡುಗೆ ಅಪಾರವಾದುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ, ನಗರದ ಮಿನ್ಸ್ಕ್ ಸ್ಕ್ವೇರ್ ಬಳಿ ಎಚ್ ಎಎಲ್ ನಿವೃತ್ತ ನೌಕರರ ಜೊತೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಮಾತನಾಡಿದ ಅವರು, ದೇಶಕ್ಕೆ ಎಚ್ ಎಎಲ್ ಬಹುದೊಡ್ಡ ಕೊಡುಗೆ ಎಂದು ಶ್ಲಾಘಿಸಿದರು.
ಎಚ್ ಎಎಲ್ ಒಂದು ಸಾಮಾನ್ಯ ಕಂಪನಿಯಲ್ಲ. ಎಚ್ ಎಎಲ್ ಸಾಮರ್ಥ್ಯದ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಮಾಮಾ ಕೂಡಾ ಶ್ಲಾಘಿಸಿದ್ದರು ಎಂದು ಹೇಳಿದರು. ಆದರೆ ಕೇಂದ್ರ ಸರ್ಕಾರ ಮಾತ್ರ ಎಚ್ ಎಎಲ್ ಗೆ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎಂದೇ ಪ್ರತಿಪಾದಿಸುತ್ತಿದೆ ಎಂದು ದೂರಿದರು.
ಬೆಂಗಳೂರಿನ ಎಚ್ ಎಎಲ್ ಗೆ ರಫೇಲ್ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವುದರಿಂದ ಸರ್ಕಾರಿ ಸ್ವಾಮ್ಯದ ಎಚ್ ಎಎಲ್ ಗೆ ಕೇಂದ್ರ ಸರಕಾರ ಅವಮಾನ ಮಾಡಿದ್ದು, ಈ ವಿಷಯದ ಕುರಿತು ರಾಹುಲ್ ಎಚ್ ಎಎಲ್ ನಿವೃತ್ತ ನೌಕರರ ಜೊತೆ ಸಂವಾದ ನಡೆಸಿದರು.
ಎಚ್ ಎಎಲ್ ಗೆ ಯುದ್ಧ ವಿಮಾನ ತಯಾರಿಸುವ ಶಕ್ತಿ ಇಲ್ಲವೇ? ದೇಶಕ್ಕೆ ಎಚ್ ಎಎಲ್ ಕೊಡುಗೆ ಎಷ್ಟಿದೆ ಎಂಬಿತ್ಯಾದಿ ಹಲವಾರು ವಿಷಯಗಳ ಕುರಿತು ರಾಹುಲ್ ಗಾಂಧಿ ನಿವೃತ್ತ ನೌಕರರ ಜೊತೆ ಸಂವಾದ ನಡೆಸುವ ಮೂಲಕ ಮಾಹಿತಿ ಪಡೆದರು.
ಚಿತ್ರ, ವಿಡಿಯೋ; ಫಕ್ರುದ್ದೀನ್ ಎಚ್