Advertisement

ರಾಹುಲ್‌ ಗಾಂಧಿಗೆ ಜೆ.ಪಿ.ನಡ್ಡಾ ಬಹಿರಂಗ ಸವಾಲು

11:26 AM Jan 05, 2020 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪೌರತ್ವ ಕಾಯ್ದೆಯ ಕುರಿತು 10 ಸಾಲುಗಳನ್ನು ಹೇಳಿ, ಅದರಲ್ಲಿರುವ ವಿವಾದಾತ್ಮಕ ಅಂಶಗಳನ್ನು ವಿವರಿಸಲಿ ನೋಡೋಣ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಬಹಿರಂಗ ಸವಾಲು ಹಾಕಿದ್ದಾರೆ.

Advertisement

ಅಸ್ಸಾಂನ ಗುವಾಹಾಟಿಯಲ್ಲಿ ಬಿಜೆಪಿ ರಾಜ್ಯ ಘಟಕ ಆಯೋಜಿಸಿದ್ದ ಪೌರತ್ವ ಕಾಯ್ದೆ ಪರ ಬೃಹತ್‌ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. ಈ ಕಾರ್ಯ ಕ್ರಮದಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಕಾಯ್ದೆ ಪರ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಕಾಂಗ್ರೆಸ್‌ ತನ್ನ ರಾಜಕೀಯಕ್ಕಾಗಿ ಸಿಎಎಯನ್ನು ಬಳಸಿ ಕೊಳ್ಳುತ್ತಿದೆ. ಕಾಯ್ದೆ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದೂ ನಡ್ಡಾ ಆರೋಪಿಸಿದ್ದಾರೆ.

ಇದೇ ವೇಳೆ, ಜಮ್ಮುವಿನಲ್ಲಿರುವ ರೋಹಿಂಗ್ಯಾ ಮುಸ್ಲಿಮರು ಸೇರಿದಂತೆ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಶನಿವಾರ ನ್ಯಾಷನಲ್‌ ಪ್ಯಾಂಥರ್ಸ್‌ ಪಾರ್ಟಿ ಶನಿವಾರ ಭಾರೀ ಪ್ರತಿಭಟನೆ ನಡೆಸಿದೆ.

9ರಿಂದ ಯಾತ್ರೆ: ಎನ್‌ಆರ್‌ಸಿ, ಸಿಎಎ ಮತ್ತು ಎನ್‌ಪಿಆರ್‌ ವಿರೋಧಿಸಿ 6 ರಾಜ್ಯಗಳ ಮೂಲಕ “ಗಾಂಧಿ ಶಾಂತಿ ಯಾತ್ರೆ’ ಕೈಗೊಳ್ಳುವುದಾಗಿ ಕೇಂದ್ರದ ಮಾಜಿ ಸಚಿವ ಯಶ್ವಂತ್‌ ಸಿನ್ಹಾ ಘೋಷಿಸಿದ್ದಾರೆ. ತಮ್ಮ ನೇತೃತ್ವದ ರಾಷ್ಟ್ರ ಮಂಚ್‌ ಜ.9ರಂದು ಮುಂಬಯಿನಿಂದ ಯಾತ್ರೆ ಆರಂಭಿಸಿ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಉ.ಪ್ರದೇಶ, ಹರ್ಯಾಣದ ಮೂಲಕವಾಗಿ ದಿಲ್ಲಿ ತಲುಪಿ ಜ.10ರಂದು ರಾಜ್‌ಘಾಟ್‌ನಲ್ಲಿ ಯಾತ್ರೆಯನ್ನು ಸಮಾಪ್ತಿಗೊಳಿಸಲಿದೆ. ಒಟ್ಟು 3 ಸಾವಿರ ಕಿ.ಮೀ.ನ ಯಾತ್ರೆ ಇದಾಗಿರಲಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

Advertisement

ಈ ನಡುವೆ, ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟಿಸಿ, ಜೈಲಲ್ಲಿರುವ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅಸ್ವಸ್ಥರಾಗಿದ್ದು, ತ್ವರಿತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಭೀಮ್‌ ಆರ್ಮಿ ಹೇಳಿದೆ‌. ಆದರೆ ಇದನ್ನು ತಳ್ಳಿಹಾಕಿರುವ ಜೈಲು ಅಧಿಕಾರಿಗಳು, ಆಜಾದ್‌ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

ಅನಿರೀಕ್ಷಿತ ಭೇಟಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಶನಿವಾರ ಉತ್ತರಪ್ರದೇಶದ ಮುಜಾಫ‌ರ್‌ನಗರ ಮತ್ತು ಮೀರತ್‌ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಇತ್ತೀಚೆಗಿನ ಗಲಭೆ ವೇಳೆ ಗಾಯಗೊಂಡ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.

ಯಾವ್ಯಾವ ರಾಜ್ಯಗಳು ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿವೆಯೋ ಹಾಗೂ ಅದನ್ನು ಜಾರಿ ಮಾಡದೇ ಇರಲು ನಿರ್ಧರಿಸುತ್ತವೆಯೋ ಅಂಥ ರಾಜ್ಯ ಸರಕಾರಗಳನ್ನೇ ವಿಸರ್ಜಿಸಿ, ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ.
– ಉದಯ್‌ಪ್ರತಾಪ್‌ ಸಿಂಗ್‌, ಬಿಜೆಪಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next