ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಗುರುವಾರ ಕಿಡಿ ಕಾರಿದ್ದು, ರಾಷ್ಟ್ರದ ರಾಜಕೀಯವನ್ನು ದೇಶದಿಂದ ಹೊರಗೆ ಬಳಸಿಕೊಳ್ಳುವುದು ರಾಷ್ಟ್ರದ ಹಿತಾಸಕ್ತಿಯಲ್ಲ ಎಂದು ಹೇಳಿದರು.
ಮೋದಿ ಸರ್ಕಾರದ ವಿರುದ್ಧ ಅಮೇರಿಕಾದಲ್ಲಿ ಕಾಂಗ್ರೆಸ್ ನಾಯಕರ ತೀವ್ರ ಟೀಕೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ, ಜೈಶಂಕರ್ ಅವರು ”ಭಾರತದೊಳಗೆ ಏನು ಮಾಡಿದರೂ ತೊಂದರೆಯಿಲ್ಲ, ಆದರೆ ಆಂತರಿಕ ಸಮಸ್ಯೆಗಳನ್ನು ಹಡಗಿನಲ್ಲಿ ತೆಗೆದುಕೊಂಡು ಹೋಗುವುದು ಸೂಕ್ತವಲ್ಲ” ಎಂದರು. 2024 ರ ಸಂಸತ್ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ಹೊರ ಹಾಕಿ ”ಏನಾಗುತ್ತದೆ ಎಂದು ನಿಮಗೆ ಗೊತ್ತಿದೆಯಲ್ಲವೇ”ಎಂದರು.
“ನೀವು ಸರ್ಕಾರದ ವಿರುದ್ಧದ ಎಲ್ಲಾ ನಿರೂಪಣೆಗಳನ್ನು ನೋಡಿ, ಅವು ದೇಶದೊಳಗೇ ಮಾಡಲ್ಪಟ್ಟಿದೆ. ಒಂದು ನಿರೂಪಣೆಯು ಕಾರ್ಯನಿರ್ವಹಿಸದಿದ್ದರೆ ಅಥವಾ ಕಡಿಮೆ ಪರಿಣಾಮಕಾರಿಯಾಗಿದ್ದರೆ, ಅದನ್ನು ವಿದೇಶಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಹೊರಗಿನ ಬೆಂಬಲವೂ ಭಾರತದಲ್ಲಿ ಕೆಲಸ ಮಾಡುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ, ”ಎಂದರು.
ರಾಷ್ಟ್ರ ರಾಜಕಾರಣವನ್ನು ವಿದೇಶಕ್ಕೆ ಕೊಂಡೊಯ್ಯುವುದರಿಂದ ರಾಹುಲ್ ಗಾಂಧಿಯವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಿಲ್ಲ ಎಂದು ಜೈಶಂಕರ್ ಹೇಳಿದರು.