Advertisement

ರಾಹುಲ್‌ ದಿಗಿಲುಗೊಳ್ಳುವ ವ್ಯಕ್ತಿ

12:54 AM Nov 14, 2020 | mahesh |

ಹೊಸದಿಲ್ಲಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾರ ರಾಜಕೀಯ ಜೀವನಾನುಭವದ ಕುರಿತ ಕೃತಿ “ಎ ಪ್ರಾಮಿಸ್ಡ್ ಲ್ಯಾಂಡ್‌’ ಈಗ ಭಾರತದಲ್ಲಿ ಬಲು ಚರ್ಚೆಯಾಗುತ್ತಿದೆ. ಆ ಪುಸ್ತಕದಲ್ಲಿ ಒಬಾಮಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಬಗ್ಗೆ ಬರೆದಿರುವ ಸಾಲುಗಳು ಇದಕ್ಕೆ ಕಾರಣ. ರಾಹುಲ್‌ ಹಾಗೂ ತಮ್ಮ ನಡುವಿನ ಭೇಟಿಯ ಬಗ್ಗೆ ನೆನಪಿಸಿಕೊಳ್ಳುತ್ತಾ ಒಬಾಮಾ, “ರಾಹುಲ್‌ ಶಿಕ್ಷಕರನ್ನು ಮೆಚ್ಚಿಸಲು ಹಂಬಲಿಸುವ ಆದರೆ, ಒಂದು ವಿಷಯವನ್ನು ಆಳವಾಗಿ ಕಲಿತುಕೊಳ್ಳಬೇಕೆಂಬ ಉತ್ಸಾಹ ಮತ್ತು ಅಭಿರುಚಿ ಇಲ್ಲದ ವಿದ್ಯಾರ್ಥಿಯಂತೆ ದಿಗಿಲುಗೊಳ್ಳುವ, ಅಪಕ್ವ ಗುಣ ಇರುವ ವ್ಯಕ್ತಿ’ ಎಂದಿದ್ದಾರೆ ಒಬಾಮಾ.

Advertisement

ಸಹಜವಾಗಿಯೇ, ಈ ಸಂಗತಿ ಸೋಶಿಯಲ್‌ ಮೀಡಿಯಾಗಳಲ್ಲಿ ಟ್ರೆಂಡ್‌ ಆಗಿದ್ದು, ಒಂದೆಡೆ ಬಿಜೆಪಿಯ ಬೆಂಬಲಿಗರು ಈ ವಿಷಯವನ್ನು ಟ್ರಾಲ್‌ ಮಾಡುತ್ತಿದ್ದರೆ, ಕಾಂಗ್ರೆಸ್‌ ಬೆಂಬಲಿಗರು ಒಬಾಮಾ ಮೇಲೆ ಮುನಿಸಿಕೊಂಡಿದ್ದಾರೆ. ಒಂದು ಚಿಕ್ಕ ಭೇಟಿಯಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅದ್ಹೇಗೆ ಅಳೆಯಲು ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ನ.17ರಂದು ಪುಸ್ತಕ ಬಿಡುಗಡೆಯಾಗಲಿದೆ. ಇದು ಮೊದಲನೇ ಭಾಗವಾಗಿದೆ. “ಕ್ರೌನ್‌ ಪಬ್ಲಿಷಿಂಗ್‌ ಗ್ರೂಪ್‌’ ಕೃತಿಯನ್ನು ಹೊರತರಲಿದೆ. ಒಬಾಮಾ ಕೃತಿಯಲ್ಲಿ ಡಾ. ಮನಮೋಹನ್‌ ಸಿಂಗ್‌ ಹಾಗೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಬಗ್ಗೆಯೂ ಉಲ್ಲೇಖವಿದೆ. ಆದರೆ ಅಮೆರಿಕದ ಮಾಜಿ ಅಧ್ಯಕ್ಷರು ಡಾ| ಮನಮೋಹನ್‌ ಸಿಂಗ್‌ ಹಾಗೂ ಸೋನಿಯಾರ ಬಗ್ಗೆ ಗುಣಾತ್ಮಕ ವಿಮರ್ಶೆ ಮಾಡಿದ್ದಾರೆ.

“ನಮಗೆ ಚಾರ್ಲಿ ಕ್ರಿಸ್ಟ್‌ ಮತ್ತು ರಹಂ ಇಮ್ಯಾನುವೆಲ್‌ರಂಥ ಪುರುಷರ ಸೌಂದರ್ಯದ ಬಗ್ಗೆ ಹೇಳಲಾಗುತ್ತದೆ. ಆದರೆ ಮಹಿಳೆಯ ಸೌಂದರ್ಯದ ಬಗ್ಗೆ ಅಲ್ಲ. ಈ ವಿಚಾರದಲ್ಲಿ ಒಂದೆರಡು ಅಪವಾದಗಳಿರಬಹುದು, ಉದಾಹರಣೆಗೆ ಇದರಲ್ಲಿ ಸೋನಿಯಾ ಗಾಂಧಿ ಕೂಡ ಇದ್ದಾರೆ’ ಎಂದು ಗುಣಗಾನ ಮಾಡಿದ್ದಾರೆ ಒಬಾಮಾ. ಇನ್ನು ಡಾ| ಮನಮೋಹನ್‌ ಸಿಂಗ್‌ರಲ್ಲಿ ಅನುದ್ವಿಗ್ನ ಪ್ರಾಮಾಣಿಕತೆ (ಇಂಪ್ಯಾಸಿವ್‌ ಇಂಟೆಗ್ರಿಟಿ) ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2015ರಲ್ಲಿ ಒಬಾಮಾ “ಟೈಮ್‌’ ನಿಯತಕಾಲಿಕಕ್ಕೆ ಬರೆದ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡಿದ್ದು ಈಗ ಚರ್ಚೆಯಾಗತೊಡಗಿದೆ. “ಬಡತನದಿಂದ ಪ್ರಧಾನಮಂತ್ರಿ ಹುದ್ದೆಯವರೆಗೆ ಸಾಗಿ ಬಂದ ಮೋದಿಯವರ ಸಾಧನೆಯ ದಾರಿ ಭಾರತದ ವೈವಿಧ್ಯವನ್ನು ತೋರಿಸುತ್ತದೆ. ಮೋದಿ ಬಾಲಕನಾಗಿದ್ದಾಗ ತಂದೆಯವರಿಗೆ ಟೀ ಮಾರಲು ನೆರವಾಗುತ್ತಿದ್ದರು. ಅವರು ಈಗ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕ’ ಎಂದು ಬಣ್ಣಿಸಿದ್ದರು.

ಗೂಗಲ್‌ ಸರ್ಚ್‌ ಹೆಚ್ಚಳ
ಒಬಾಮಾರ ಪುಸ್ತಕದ ಆಯ್ದ ಭಾಗಗಳು ಹೊರಬೀಳುತ್ತಿದ್ದಂತೆಯೇ, ಭಾರತೀಯರೆಲ್ಲ ರಾಹುಲ್‌ ಹಾಗೂ ಮನಮೋಹನ್‌ ಸಿಂಗ್‌ ಕುರಿತು ಒಬಾಮಾ ಹೇಳಿದ ಪದಗಳ ಅರ್ಥವನ್ನು ಹುಡುಕಲಾರಂಭಿಸಿದ್ದಾರೆ. “ಇಂಪ್ಯಾಸಿವ್‌’ ಅಂದರೇನು, “ಇಂಟೆಗ್ರಿಟಿ’ ಅಂದರೇನು ಎನ್ನುವ ಗೂಗಲ್‌ ಸರ್ಚ್‌ ಹೆಚ್ಚಾಗಿದೆಯಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next