Advertisement

ಬುಡಕಟ್ಟು ಮಹಿಳೆ ರಾಷ್ಟ್ರಪತಿಯಾಗಿರುವುದು ರಾಹುಲ್‌ ಗಾಂಧಿಗೆ ಗೊತ್ತಿಲ್ಲವೇ : ತೇಜಸ್ವಿ ಸೂರ್ಯ

08:30 PM Mar 12, 2023 | Team Udayavani |

ಕೊರಟಗೆರೆ: ಪ್ರಜಾಪ್ರಭುತ್ವ ಕಷ್ಟದಲ್ಲಿದೆ ಎಂದು ರಾಹುಲ್‌ಗಾಂಧಿ ಲಂಡನ್ ಮತ್ತು ಬ್ರಿಟನ್‌ನಲ್ಲಿ ಭಾಷಣ ಮಾಡುತ್ತಾರೆ, ರಾಷ್ಟ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗದಿದ್ದರೆ ಪ್ರಜಾಪ್ರಭುತ್ವ ಕಷ್ಟದಲ್ಲಿದೆ ಎಂಬುದು ನಿಮ್ಮ ಮಾತಿನ ಅರ್ಥವೇ? ಕಾಂಗ್ರೆಸ್ ಪಕ್ಷದ ಸುಳ್ಳಿನ ಭರವಸೆ ಮತ್ತು ಆಶ್ವಾಸನೆಯಿಂದ ಅವರ ನಾಯಕರು ಮಾತ್ರ ಅಭಿವೃದ್ದಿ ಆಗಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕಿಡಿ ಕಾರಿದರು.

Advertisement

ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊರಟಗೆರೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಯುವ ಮೋರ್ಚಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ರೈಲ್ವೆ ನಿಲ್ದಾಣದಲ್ಲಿ ಟೀ ಮಾರುತ್ತೀದ್ದ ವ್ಯಕ್ತಿಯೋರ್ವ ನಮ್ಮ ದೇಶದ ಪ್ರಧಾನಿ. ಬುಡಕಟ್ಟು ಜನಾಂಗದ ಬಡಮಹಿಳೆ ಇವತ್ತು ನಮ್ಮ ದೇಶದ ರಾಷ್ಟ್ರಪತಿ ಆಗಿರುವ ವಿಚಾರ ರಾಹುಲ್‌ ಗಾಂಧಿಗೆ ಗೊತ್ತಿಲ್ಲವೇ. 41 ವರ್ಷದ ನಂತರ ಮಂಡ್ಯಕ್ಕೆ ಪ್ರಧಾನಿಯ ಆಗಮನ ಆಗಿದೆ. ವಿಶ್ವನಾಯಕ ನರೇಂದ್ರ ಮೋದಿಗೆ ಕರ್ನಾಟಕದ ಮಂಡ್ಯದಲ್ಲಿ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ವಿಶ್ವಗುರು ಭಾರತ ದೇಶವೂ ಅಭಿವೃದ್ದಿಯತ್ತ ಸಾಗುತ್ತಿದೆ ಎಂದರು.

ಕರ್ನಾಟಕ ಬಿಜೆಪಿ  ಉಪಾಧ್ಯಕ್ಷ ವಿಜಯೇಂದ್ರ ಮಾತನಾಡಿ, ರೈತರಿಗೆ ಉಚಿತ ವಿದ್ಯುತ್ ಮತ್ತು ಬಡ್ಡಿರಹಿತ ಸಾಲನೀಡಿದ ರೈತನಾಯಕ ಯಡಿಯೂರಪ್ಪ ಮಾತ್ರ. ಶಿರಾ ಕ್ಷೇತ್ರಕ್ಕೆ ನಾನು ನೀಡಿದ ನೀರಾವರಿಯ ಆಶ್ವಾಸನೆ 20 ದಿನದ ಒಳಗಡೆ ಈಡೇರಿದೆ. ನುಡಿದಂತೆ ನಡೆಯುವ ಶಕ್ತಿ ಇರೋದು ಬಿಜೆಪಿ ಸರಕಾರಕ್ಕೆ ಮಾತ್ರ. ರೈಲ್ವೆ ಅಭಿವೃದ್ದಿ, ರಾಜ್ಯ ಹೆದ್ದಾರಿ ಮತ್ತು ನೀರಾವರಿ ಯೋಜನೆಗೆ ಸರಕಾರ ಆಧ್ಯತೆ ನೀಡಿದೆ. ಕಾಂಗ್ರೆಸ್ ಪಕ್ಷ ಕೇವಲ ಉಚಿತ ಯೋಜನೆಗೆ ಮಾತ್ರ ಸೀಮಿತ.70 ವರ್ಷದಿಂದ ಕಾಂಗ್ರೆಸ್ ನಾಯಕರ ಬಡತನ ನಿರ್ಮೂಲನೆ ಆಗಿದೆ ಅಷ್ಟೆ ಎಂದರು.

ತುಮಕೂರು ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ವಿಶ್ವನಾಯಕ ನರೇಂದ್ರ ಮೋದಿ ನಮ್ಮ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ. ನಮ್ಮ ಜಿಲ್ಲೆಯ ಎಲ್ಲಾ ರಾಜ್ಯ ಹೆದ್ದಾರಿಗಳು ಅಭಿವೃದ್ದಿಯ ಪಥದತ್ತ ಸಾಗುತ್ತಿದೆ. ತುಮಕೂರಿನ 11 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಯುವಕರು ಹೋರಾಟ ಮಾಡಬೇಕಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ರಾಜ್ಯ ಯುವಮೋರ್ಚಾ ಅಧ್ಯಕ್ಷ ಡಾ.ಸಂದೀಪ್, ರಾಜ್ಯ ಕಾರ್ಯದರ್ಶಿ ವಿನಯ್‌ ಬಿದರೆ, ತುಮಕೂರು ಜಿಲ್ಲಾ ಪ್ರಭಾರಿ ನವೀನ್, ಬಿಜೆಪಿ ಯುವಜಿಲ್ಲಾ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಮಧುಗಿರಿ ಜಿಲ್ಲಾಧ್ಯಕ್ಷ ಮಂಜುನಾಥ, ಕೊರಟಗೆರೆ ಅಧ್ಯಕ್ಷ ಪವನಕುಮಾರ್, ಕೊರಟಗೆರೆ ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್‌ಕುಮಾರ್, ಗಂಗಹನುಮಯ್ಯ, ಡಾ.ಲಕ್ಷ್ಮೀಕಾಂತ್ ಸೇರಿದಂತೆ ಇತರರು ಇದ್ದರು.

ಜಗ್ಗೇಶ್, ಮುದ್ದಹನುಮೇಗೌಡ ಗೈರು
ಸಮಾವೇಶಕ್ಕೆ ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಸಂಸದ ಮುದ್ದಹನುಮೇಗೌಡ ಗೈರಾಗಿದ್ದು ಅಭಿಮಾನಿ ಬಳಗ ಮತ್ತು ಕಾರ್ಯಕರ್ತರ ನಿರಾಸೆಗೆ ಕಾರಣವಾಯಿತು. ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಕೆ.ಎಂ.ಮುನಿಯಪ್ಪ ಮತ್ತು ವೈ.ಹೆಚ್.ಹುಚ್ಚಯ್ಯ ಕೂಡ ಸಮಾವೇಶಕ್ಕೆ ಗೈರಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next