ನವದೆಹಲಿ: ಕೇಂದ್ರ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವಂತೆ ದೆಹಲಿಯ ಗಡಿಭಾಗದಲ್ಲಿ ಒಂದು ವರ್ಷಗಳ ಕಾಲ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಾವನ್ನಪ್ಪಿರುವ ರೈತ ಕುಟುಂಬದ ಸದಸ್ಯರಿಗೆ ಪರಿಹಾರ ಹಾಗೂ ಉದ್ಯೋಗ ನೀಡಬೇಕೆಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ (ಡಿಸೆಂಬರ್ 07) ಲೋಕಸಭೆಯಲ್ಲಿ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ:ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ
ಶೂನ್ಯ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ, ಒಂದು ವರ್ಷಗಳ ದೀರ್ಘಾವಧಿ ಪ್ರತಿಭಟನೆ ನಡೆಸಿದ ವೇಳೆ ಸಾವನ್ನಪ್ಪಿರುವ ರೈತರ ಅಂಕಿ ಅಂಶಗಳ ದಾಖಲೆ ಇಲ್ಲ ಎಂದು ಹೇಳಿರುವುದು ಕೇಂದ್ರ ಸರ್ಕಾರದ ಅಸಾಮರ್ಥ್ಯವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ ಪ್ರತಿಭಟನೆ ವೇಳೆ ಸಾವನ್ನಪ್ಪಿರುವ ರೈತ ಕುಟುಂಬದ ಸದಸ್ಯರಿಗೆ ಪರಿಹಾರ ನೀಡಿರುವ ರೈತ ಕುಟುಂಬದ ಪಟ್ಟಿಯನ್ನು ಲೋಕಸಭೆಗೆ ನೀಡಿದರು.
ರೈತ ಪ್ರತಿಭಟನೆ ಮತ್ತು ಸಾವಿನ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಬೇಕೆಂದು ಕಾಂಗ್ರೆಸ್ ಸಂಸದರು ಒತ್ತಾಯಿಸಿದ್ದು, ಬಳಿಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್, ಎನ್ ಸಿಪಿ ಹಾಗೂ ಡಿಎಂಕೆ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದಿರುವುದಾಗಿ ವರದಿ ತಿಳಿಸಿದೆ.
ಒಂದು ವರ್ಷಗಳ ಕಾಲ ನಡೆದ ಪ್ರತಿಭಟನೆ ಸಂದರ್ಭದಲ್ಲಿ 700 ರೈತರು ಸಾವನ್ನಪ್ಪಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ಕ್ಷಮೆಯಾಚನೆ ಮಾಡಿ, ಕೃಷಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದರು. ಆದರೆ ಕೃಷಿ ಸಚಿವರು ತಮ್ಮ ಬಳಿ ಸಾವನ್ನಪ್ಪಿರುವ ರೈತರ ಅಂಕಿಅಂಶವೇ ಇಲ್ಲ ಎಂದು ಹೇಳಿಕೆ ನೀಡುತ್ತಾರೆ ಎಂಬುದಾಗಿ ರಾಹುಲ್ ಟೀಕಿಸಿದರು.