Advertisement

Karnataka Poll: ಇಂದಿನಿಂದ ರಾಹುಲ್‌ ಪ್ರಚಾರ…ಬಸವಜಯಂತಿಯಂದೇ ಕೂಡಲಸಂಗಮದಲ್ಲಿ ಆರಂಭ

01:11 AM Apr 23, 2023 | Team Udayavani |

ಬೆಂಗಳೂರು: ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರವಿವಾರ ಲಿಂಗಾಯತರ ಶಕ್ತಿಕೇಂದ್ರ ಕೂಡಲ ಸಂಗಮಕ್ಕೆ ಭೇಟಿ ನೀಡಲಿದ್ದಾರೆ.

Advertisement

ಬಸವ ಜಯಂತಿಯಂದೇ ಬಸವಣ್ಣನ ಜನ್ಮಭೂಮಿ, ಐಕ್ಯಭೂಮಿಗೆ ರಾಹುಲ್‌ ಆಗಮಿಸುತ್ತಿರುವುದು ಕುತೂಹಲ ಮೂಡಿಸಿದೆ. ಕೂಡಲ ಸಂಗಮದಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ಬಸವೇಶ್ವರ ಜಯಂತಿ ಉತ್ಸವದಲ್ಲಿ ಪಾಲ್ಗೊಂಡು ಅನಂತರ ವಿಜಯಪುರದಲ್ಲಿ ರೋಡ್‌ ಶೋ ನಡೆಸಿ ಅಧಿಕೃತವಾಗಿ ಚುನಾವಣ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

ಬಸವ ಜಯಂತಿ ಉತ್ಸವಕ್ಕೆ ಲಿಂಗಾಯತ ಸಮುದಾಯದ ಸ್ವಾಮೀಜಿಗಳಿಗೂ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಇರಲಿದ್ದಾರೆ. ರಾಹುಲ್‌ ಗಾಂಧಿಯವರು ಕೂಡಲಸಂಗಮದ ಬಸವ ಐಕ್ಯ ಮಂಟಪದಲ್ಲಿ ಬಸವೇಶ್ವರ ಐಕ್ಯ ಸ್ಥಳದ ಲಿಂಗ, ಸಂಗಮೇಶ್ವರ ದರ್ಶನ ಪಡೆಯಲಿದ್ದಾರೆ. ಬಳಿಕ ಕೂಡಲ ಸಂಗಮದಲ್ಲಿ ನಡೆಯಲಿರುವ ಬಸವ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉತ್ತರ ಕರ್ನಾಟಕದ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳ ಕಾಂಗ್ರೆಸ್‌ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಪಾಲ್ಗೊಳ್ಳುವುದು ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಬೆಂಗಳೂರು ಮೂಲದ “ಯುವ ಬಸವ ಸಮಿತಿ’ ಯಿಂದ ಈ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಕಾಂಗ್ರೆಸ್‌ ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ. ಆದರೂ ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ವಹಿಸಿಕೊಂಡಿದ್ದಾರೆ.

Advertisement

ಐವರು ಸ್ವಾಮೀಜಿಗಳು ಭಾಗಿ
ಕಾರ್ಯಕ್ರಮದಲ್ಲಿ ಕೂಡಲಸಂಗಮದ ಬಸವ ಧರ್ಮ ಪೀಠದ ಶ್ರೀಮಾದೇಶ್ವರ ಸ್ವಾಮೀಜಿ, ಭಾಲ್ಕಿ ಹಿರೇಮಠದ ಶ್ರೀಬಸವಲಿಂಗ ಪಟ್ಟದೇವರು, ಇಳಕಲ್ಲಿನ ಶ್ರೀ ಗುರುಮಹಾಂತ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಶ್ರೀಸಿದ್ಧರಾಮ ಸ್ವಾಮೀಜಿ ಭಾಗವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪಾಲ್ಗೊಳ್ಳಲಿದ್ದಾರೆ.

ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಅನಂತರ ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ತಂತ್ರ ಹೂಡಿದ್ದು, ಇದರ ಭಾಗವಾಗಿಯೇ ಈ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ. ಬಸವಣ್ಣನವರ, ಕಾಯಕನಿಷ್ಠೆಯ ಮೇಲೆ ಲಿಂಗಾಯತ ಸಮುದಾಯವಿದೆ. ಅದೇ ತತ್ವವನ್ನೂ ಕಾಂಗ್ರೆಸ್‌ ಪ್ರತಿಪಾದಿಸುತ್ತದೆ ಎಂಬ ಸಂದೇಶ ನೀಡುವುದು ಈ ಕಾರ್ಯಕ್ರಮದ ಹಿಂದಿನ ಉದ್ದೇಶ ಎಂದು ವ್ಯಾಖ್ಯಾನಿಸಲಾಗುತ್ತದೆ.

ಪ್ರಚಾರ ಕಣಕ್ಕೆ ಅಣ್ಣ-ತಂಗಿ
ಚುನಾವಣೆ ಹಿನ್ನೆ ಲೆ ರಾಜ್ಯದಲ್ಲಿ ರಾಹುಲ್‌ ಗಾಂಧಿ 15 ದಿನ ಹಾಗೂ ಪ್ರಿಯಾಂಕಾ ವಾದ್ರಾ 10 ದಿನ ಪ್ರಚಾರ ನಡೆಸಲಿದ್ದು, ಜನಸಂಪರ್ಕ ಯಾತ್ರೆ ಮೂಲಕ ರಣಕಹಳೆ ಮೊಳಗಿಸಲಿದ್ದಾರೆ. ಪ್ರತೀ ದಿನ 3 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಯೋಜನೆ ರೂಪಿಸಲಾಗಿದೆ. ಸೋನಿಯಾ ಗಾಂಧಿ ಬೆಂಗಳೂರು ಹಾಗೂ ಕಲಬುರಗಿ ವಿಭಾಗದ ಎರಡು ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಹುಲ್‌ ಗಾಂಧಿ ಉತ್ತರ ಕರ್ನಾಟಕದ ಭಾಗ ದಲ್ಲಿ ಪ್ರಚಾರ ಮಾಡಿದರೆ ಪ್ರಿಯಾಂಕಾ ದಕ್ಷಿಣ ಕರ್ನಾಟಕದಲ್ಲಿ ಪ್ರಚಾರ ನಡೆ ಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎ. 25ರಂದು ಪ್ರಿಯಾಂಕಾ ಚಾಮರಾಜನಗರದ ಹನೂರು ಕ್ಷೇತ್ರದಲ್ಲಿ ಚುನಾವಣ ಪ್ರಚಾರ ನಡೆಸಲಿದ್ದಾರೆ ಎಂದು ಶಾಸಕ ಆರ್‌. ನರೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next