ತುಮಕೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಿದ್ದಗಂಗಾ ಶ್ರೀಗಳಾದ ಡಾ. ಶಿವಕುಮಾರ್ ಸ್ವಾಮೀಜಿ ಅವರನ್ನು ಬುಧವಾರ ಮಧ್ಯಾಹ್ನ ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ಮಠದ ಸುತ್ತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು ಮಾತ್ರವಲ್ಲದೆ ಪಾಸ್ ಇಲ್ಲದವರಿಗೆ ಪ್ರವೇಶಕ್ಕೆ ಅವಕಾಶವಿರಲಿಲ್ಲ.
ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಹಾಜರಿದ್ದರು.
ಶ್ರೀಗಳು ರಾಹುಲ್ ಜೊತೆ ಕೆಲ ಹೊತ್ತು ಮಾತನಾಡಿ ಮಂತ್ರಾಕ್ಷತೆ ಹಾಕಿ ಹರಸಿದರು. ರಾಹುಲ್ ಶ್ರೀಗಳ ಭಾವಚಿತ್ರವಿರುವ ಸ್ಮರಣಿಕೆಯನ್ನು ನೀಡಿದರು.
ಅರತಕ್ಷತೆಗೆ ಅಡ್ಡಿ
ರಾಹುಲ್ ಭೇಟಿ ಹಿನ್ನಲೆಯಲ್ಲಿ ಮಠಕ್ಕೆ ಸಾಮಾನ್ಯ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಎಸ್‌ಪಿಜಿ ಭದ್ರತಾ ಪಡೆಗಳು ವ್ಯಾಪಕ ಕಟ್ಟೆಚ್ಚರ ವಹಿಸಿದ್ದರು.
ಸಂಜೆ ನಡೆಯ ಬೇಕಾಗಿದ್ದ ಅರತಕ್ಷತೆ ಕಾರ್ಯಕ್ರಮದ ಅಡುಗೆಗಾಗಿ ಮಠದೊಳಗೆ ತೆರಳಬೇಕಾಗಿದ್ದ ಅಡುಗೆ ಭಟ್ಟರಿಗೆ ತಡೆ ಹಾಕಲಾಯಿತು.
ಸಂತೋಷ್, ನಿವೇದಿತಾ ಅವರ ಅರತಕ್ಷತೆ ಮಠದಲ್ಲಿದ್ದ ಉದ್ದಾನೇಶ್ವರ ಸಮುದಾಯ ಭವನದಲ್ಲಿ ನಡೆಯಲಿದ್ದು, ನಾಳೆ ವಿವಾಹ ನಡೆಯಲಿದೆ.