ಹೊಸದಿಲ್ಲಿ: ಚುನಾವಣ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅಮಿತ್ ಶಾ ನೀಡಿದ್ದ ಹೇಳಿಕೆಗಳಿಗೆ ಚುನಾವಣ ಆಯೋಗ ಕ್ಲೀನ್ ಚಿಟ್ ನೀಡಿದ್ದನ್ನು ಆಕ್ಷೇಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಚುನಾವಣ ಆಯೋಗವು ಪಕ್ಷಪಾತ ಮಾಡುತ್ತಿದೆ ಎಂದಿದ್ದಾರೆ. ಬಿಜೆಪಿ ವಿಚಾರದಲ್ಲಿ ಸರಿಯಾಗಿಯೇ ವರ್ತಿಸುವ ಆಯೋಗ ವಿಪಕ್ಷ ದ ವಿಷಯಕ್ಕೆ ಬಂದಾಗ ಪಕ್ಷಪಾತ ಮಾಡುತ್ತದೆ. ಇದು ಕೇವಲ ಚುನಾವಣ ಆಯೋಗವಲ್ಲ, ಸುಪ್ರೀಂಕೋರ್ಟ್, ಯೋಜನ ಆಯೋಗ ಮತ್ತು ಆರ್‌ಬಿಐಯಲ್ಲೂ ಹೀಗೆಯೇ ಆಗುತ್ತಿದೆ. ಚುನಾವಣ ಆಯೋಗವು ಒತ್ತಡಕ್ಕೆ ಸಿಲುಕಬಾರದು ಎಂದು ಅವರು ಹೇಳಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಚುನಾವಣ ಪ್ರಚಾರ ರ್ಯಾಲಿಗಳಲ್ಲಿ ನೀಡಿದ ಹಲವು ಹೇಳಿಕೆಗಳ ವಿರುದ್ಧದ ದೂರುಗಳನ್ನು ಶುಕ್ರವಾರ ಪರಿಶೀಲಿಸಿದ ಚುನಾವಣ ಆಯೋಗ, ಅವರಿಗೆ ಕ್ಲೀನ್‌ಚಿಟ್ ನೀಡಿತ್ತು. ಆದರೆ ಎಪ್ರಿಲ್ 23ರಂದು ಮಧ್ಯಪ್ರದೇಶದ ಶಾಹ್‌ದೋಲ್ನಲ್ಲಿ ರಾಹುಲ್ ನೀಡಿದ ಹೇಳಿಕೆಗೆ ಮೇ 1ರಂದು ಆಯೋಗ ನೋಟಿಸ್ ನೀಡಿತ್ತು.