Advertisement

ತೀವ್ರ ವಾಗ್ಧಾಳಿ ;ಕಲಾಪದಲ್ಲೇ ಪ್ರಧಾನಿಯನ್ನು ತಬ್ಬಿಕೊಂಡ ರಾಹುಲ್‌ !!

02:14 PM Jul 20, 2018 | |

ಹೊಸದಿಲ್ಲಿ: ಸಂಸತ್ತಿನಲ್ಲಿ ಶುಕ್ರವಾರ ಅವಿಶ್ವಾಸ ಕಲಾಪ ಆರಂಭವಾಗಿದ್ದು ವಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ಸಮರ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹಲವು ವಿಚಾರಗಳನ್ನು ಪ್ರಸ್ತಾವಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮಾತ್ರವಲ್ಲದೆ ಪ್ರಧಾನಿಯನ್ನು ಕಲಾಪದಲ್ಲೇ ಆಲಂಗಿಸಿದರು, ಬಳಿಕ ಕಣ್ಣು ಹೊಡೆದು ಹಲವು ವಿಶೇಷತೆಗಳಿಗೆ ಕಲಾಪವನ್ನು ಸಾಕ್ಷಿಯಾಗಿಸಿದರು. 

Advertisement

ಮೋದಿ ಚೌಕಿದಾರ್‌ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗಿದಾರ ಎಂದ ರಾಹುಲ್‌ ಪ್ರಧಾನಿ ಮೋದಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವಿಲ್ಲ ಎಂದರು.ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನಗುತ್ತಾ ಕುಳಿತಿದ್ದರು.

ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಅಂದು ಮೋಸ ಮಾಡಿದರು. 4 ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ವಂಚಿಸಿದರು. ಕೇವಲ 4 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. ಕೆಲವು ಕಡೆ ಹೋಗಿ ಪಕೋಡಾ ಮಾರಿ ಎನ್ನುತ್ತಾರೆ ಎಂದು ಕಿಡಿ ಕಾರಿದರು. 

ಪ್ರಧಾನಿ ಚೀನಾ ಅಧ್ಯಕ್ಷರೊಂದಿಗೆ ಗುಜರಾತ್‌ನಲ್ಲಿ ನದಿ ತೀರದಲ್ಲಿ ಜೋಕಾಲಿ ಆಡುತ್ತಿದ್ದರು. ಆವೇಳೆ ಡೋಕ್ಲಾಂನಲ್ಲಿ ಚೀನಾದ ಸಾವಿರ ಸೈನಿಕರು ನಮ್ಮ ಗಡಿ ನುಸುಳಿದ್ದರು.ಪ್ರಧಾನಿ ಯಾವುದೇ ಅಜೆಂಡಾ ಇಲ್ಲದೆ ಚೀನಾ ಪ್ರವಾಸ ಮಾಡಿದರು.ಅಲ್ಲಿ ಡೋಕ್ಲಾಂ ವಿಚಾರ ಕುರಿತು ಚಕಾರವೆತ್ತಿಲ್ಲ ಎಂದು ಕಿಡಿ ಕಾರಿದರು. 

Advertisement

ರಾಫೆಲ್‌ ಯುದ್ದ ವಿಮಾನ ಖರೀದಿ ವಿಚಾರದಲ್ಲಿ ನಾನು ಫ್ರಾನ್ಸ್‌ ಅಧ್ಯಕ್ಷರೊಂದಿಗೆ ನಾನು ಮಾತನಾಡಿದ್ದೇನೆ.ಅವರು ಭಾರತದೊಂದಿಗೆ ಯಾವುದೇ ಒಪ್ಪಂದ ನಡೆದಿಲ್ಲ ಎಂದಿದ್ದಾರೆ. ಮೋದಿ ತಮ್ಮ ಆಪ್ತರ ಜೇಬು ತುಂಬುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. 

ಈ ವೇಳೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಆರೋಪ ಮಾಡಿದರೆ ಸಾಲದು ಈ ಕುರಿತು ಸಾಕ್ಷ್ಯ ನೀಡಿ ಎಂದು ಪಟ್ಟು ಹಿಡಿದರು. 

ಪ್ರಧಾನಿ 15 ರಿಂದ 20 ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಕೂಗು ಅವರಿಗೆ ಕೇಳಿಸುತ್ತಿಲ್ಲ ಎಂದರು. 

ಭಾರತದ ಇತಿಹಾಸದಲ್ಲೇ ಮೊದಲು ಸರ್ಕಾರವೊಂದು ಮಹಿಳೆಯರ ರಕ್ಷಣೆ ಮಾಡುತ್ತಿಲ್ಲ ನಿರಂತರ ಗ್ಯಾಂಗ್‌ ರೇಪ್‌ಗ್ಳು ನಡೆಯುತ್ತಿದೆ ಎಂದರು. 

ಅಮಿತ್‌ ಶಾ ಮತ್ತು ಮೋದಿಗೆ ಅಧಿಕಾರ ಇಲ್ಲದಿದ್ದರೆ ಆಗುವುದಿಲ್ಲ. ನಾವು ವಿಪಕ್ಷಗಳೆಲ್ಲಾ ಒಂದಾಗಿ ಪ್ರಧಾನಿಯನ್ನು ಸೋಲಿಸಲು ಹೊರಟಿದ್ದೇವೆ ಎಂದರು. 

ನಾನು  ನಿಮಗೆ ಪಪ್ಪು ಆಗಿರಬಹುದು. ಆದರೆ ಕಾಂಗ್ರೆಸ್‌ ಪಕ್ಷ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ ಎಂದರು. 

ನನ್ನಲ್ಲಿರುವ ಆಕ್ರೋಶ ಭಾವನೆಗಳು ಬಿಜೆಪಿ ಸದಸ್ಯರಲ್ಲೂ ಇದೆ. ನಾನು ಎಲ್ಲರನ್ನೂ ಕಾಂಗ್ರೆಸಿಗರನ್ನಾಗಿಯೂ ಬದಲಾಯಿಸುತ್ತೇನೆ ಎಂದರು. 

ತಮ್ಮ ದೀರ್ಘ‌ ವಾಗ್ಧಾಳಿಯ ಬಳಿಕ ಪ್ರಧಾನಿ ಕುಳಿತಲ್ಲಿಗೆ ತೆರಳಿ ಅವರಿಗೆ ಹಸ್ತಲಾಘವ ನೀಡಿ ಆಲಿಂಗಿಸಿ ಬಂದರು. ಈ ವೇಳೆ ಸದನ ನಗೆ ಗಡಲಲ್ಲಿ ತೇಲಾಡಿತು. 

ಮತ್ತೆ ತಮ್ಮ ಸ್ಥಳಕ್ಕೆ ಬಂದು ನಾನು ಹಿಂದು, ನೀವು ಎಷ್ಟೇ ದೂರ ತಳ್ಳಿದರೂ ಹತ್ತಿರಮಾಡಿಕೊಳ್ಳುತ್ತೇನೆ ಎಂದರು.

ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಸದನದ ಗೌರವ ಘನತೆ ಎತ್ತಿಹಿಡಿದು, ಆರೋಪ ಮಾಡುವ ವೇಳೆ ಸಾಕ್ಷ್ಯ ನೀಡಬೇಕಾಗುತ್ತದೆ ಎಂದು ಸಲಹೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next