ಮಂಗಳೂರು: ಲೋಕಸಭಾ ಚುನಾ ವಣೆ ಪ್ರಚಾರಕ್ಕಾಗಿ ರಾಷ್ಟ್ರೀಯ ಅಧ್ಯಕ್ಷರ ಸಹಿತ ಸ್ಟಾರ್ ನಾಯಕರನ್ನು ಕರಾವಳಿಗೆ ಕರೆತರುವ ಪ್ರಯತ್ನದಲ್ಲಿ ವಿವಿಧ ರಾಜಕೀಯ ಪಕ್ಷಗಳು ತೊಡಗಿವೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳಲಿದೆ.
ಪ್ರಸ್ತುತ ಎಲ್ಲ ಪಕ್ಷಗಳ ಪ್ರಚಾರವೂ ಒಂದು ಹದದಲ್ಲಿ ನಡೆಯುತ್ತಿದ್ದು, ಸ್ಟಾರ್ ನಾಯಕರ ಆಗಮನದ ಬಳಿಕ ವೇಗ ಪಡೆದುಕೊಳ್ಳುವ ಸಂಭವವಿದೆ. ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಪರ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಎ. 13ರಂದು ಉಡುಪಿಗೆ ಆಗಮಿಸುವುದು ಖಚಿತವಾಗಿದೆ. ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣ ಪ್ರಚಾರದಲ್ಲೂ ಭಾಗಿಯಾಗುವ ಸಾಧ್ಯತೆ ಇದೆ.
ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರನ್ನು ಮಂಗಳೂರಿಗೆ ಕರೆತರುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ. ಬಿಜೆಪಿಯು ಉಭಯ ಜಿಲ್ಲೆಗಳಲ್ಲಿ ರಾಷ್ಟ್ರೀಯ ನಾಯಕರಿಂದಲೇ ಪ್ರಚಾರ ಮಾಡಿಸಿ ರಂಗು ಮೂಡಿಸುವ ಉತ್ಸಾಹದಲ್ಲಿದೆ. ಪ್ರಧಾನಿ ಅವರನ್ನು ಕರೆತರುವುದು ಈ ಕಾರ್ಯತಂತ್ರದ ಭಾಗ. ಇನ್ನುಳಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕರೆಸುವ ಪ್ರಯತ್ನ ನಡೆಯುತ್ತಿದೆ. ಎ. 2ರಂದು ಕಾಂಗ್ರೆಸ್ ರಾಜ್ಯ ಮುಖಂಡರಾದ ದಿನೇಶ್ ಗುಂಡೂರಾವ್ ಮತ್ತು ಡಿ.ಕೆ. ಶಿವಕುಮಾರ್ ಬೆಳ್ತಂಗಡಿ, ಪುತ್ತೂರು, ಸುಳ್ಯ ಗಳಲ್ಲಿ ಪ್ರಚಾರ ನಡೆಸುವರು. ಎಸ್‌ಡಿಪಿಐಯ ರಾಷ್ಟ್ರೀಯ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗವಹಿಸುವ ಲಕ್ಷಣಗಳಿವೆ.
ಹಿಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ನಡೆದಾಗ ಘಟಾನುಘಟಿ ನಾಯಕರು ಆಗಮಿಸಿ ಪ್ರಚಾರ ನಡೆಸಿದ್ದರು. 1951ರಲ್ಲಿ ಪ್ರಧಾನಿ ಜವಹಾರ್‌ಲಾಲ್ ನೆಹರೂ ಭೇಟಿ ನೀಡಿದ ನೆನಪಿಗಾಗಿ ಮಂಗಳೂರಿನ ಕೇಂದ್ರ ಮೈದಾನಕ್ಕೆ ನೆಹರೂ ಮೈದಾನ ಎಂದು ಹೆಸರಿಡಲಾಗಿತ್ತು. ಆ ಬಳಿಕವೂ ಹಲವಾರು ರಾಷ್ಟ್ರೀಯ ನಾಯಕರು ಮಂಗಳೂರಿಗೆ ಆಗಮಿಸಿ ಪ್ರಚಾರ ನಡೆಸಿದ್ದಾರೆ.
70ರ ದಶಕದಲ್ಲಿ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಮಂಗಳೂರಿಗೆ ಬಂದಿದ್ದು, ಮುಟ್ಟಾಳೆ ಇರಿಸಿ ತುಳುವಿನಲ್ಲಿ ಭಾಷಣ ಮಾಡಿದ್ದರು. ಬಿಜೆಪಿಯ ವಾಜಪೇಯಿ ಅವರ ಭಾಷಣ ಕೇಳಲು ನೆಹರೂ ಮೈದಾನ ದಲ್ಲಿ ಪಕ್ಷಭೇದವಿಲ್ಲದೆ ಜನ ಸೇರಿದ್ದರು.