Advertisement

ಶಾಸಕರ ಹಿಡಿದಿಟ್ಟುಕೊಳ್ಳಲು ರಾಹುಲ್‌ ಫ‌ರ್ಮಾನು

06:36 AM Jun 22, 2019 | Lakshmi GovindaRaj |

ಬೆಂಗಳೂರು: “ಸ್ವಂತ ವರ್ಚಸ್ಸಿನಿಂದ ಗೆಲ್ಲುವ ಸಾಮರ್ಥ್ಯ ಇರುವ ಶಾಸಕರು ಎಂತಹ ಪರಿಸ್ಥಿತಿಯಲ್ಲೂ ಬಿಜೆಪಿಯತ್ತ ಹೋಗದಂತೆ ನೋಡಿಕೊಳ್ಳಿ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ ಪಾಲಿನ ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೂ ಮಾತನಾಡಿದ್ದು, ಇದರ ಫ‌ಲವೇ ಡಾ.ಕೆ.ಸುಧಾಕರ್‌ ಹಾಗೂ ವೆಂಕಟರಮಣಯ್ಯ ಅವರಿಗೆ ಅಧಿಕಾರ “ಭಾಗ್ಯ’ ದೊರೆತಿದೆ. ಸದ್ಯದಲ್ಲೇ ಕಾಂಗ್ರೆಸ್‌ ಪಾಲಿನ 30ಕ್ಕೂ ಹೆಚ್ಚು ನಿಗಮ ಮಂಡಳಿಗಳ ನೇಮಕಾತಿಯೂ ನಡೆಯಲಿದೆ.

ದೆಹಲಿಯಲ್ಲಿ ಸಿದ್ದರಾಮಯ್ಯ ಅವರು ರಾಹುಲ್‌ಗಾಂಧಿಯವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ಸ್ವ ಸಾಮರ್ಥ್ಯದಿಂದ ಗೆಲ್ಲುವ ವರ್ಚಸ್ಸು ಇರುವ ಶಾಸಕರನ್ನು ಬಿಜೆಪಿಗೆ ಹೋಗದಂತೆ ನೋಡಿಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರ್‍ನಾಲ್ಕು ಸಾವಿರ ಮತಗಳಿಂದ ಸೋತ ಅಭ್ಯರ್ಥಿಗಳಿಗೆ ನಿಗಮ-ಮಂಡಳಿ ಅಧ್ಯಕ್ಷಗಿರಿ ನೀಡಬೇಕು ಎಂದು ತಿಳಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರ್ಕಾರ ಇರುವಷ್ಟು ದಿನ ಕಾಂಗ್ರೆಸ್‌ನ ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಧ್ಯಕ್ಷ-ಉಪಾಧ್ಯಕ್ಷ, ನಾಮ ನಿರ್ದೇಶನದ ಅವಕಾಶ ಮಾಡಿಕೊಟ್ಟು, ಇದರ ಜತೆಗೆ ಪಕ್ಷವನ್ನೂ ಸಂಘಟಿಸುವುದು ಹೈಕಮಾಂಡ್‌ ಉದ್ದೇಶ ಎಂದು ಹೇಳಲಾಗಿದೆ.

ದೆಹಲಿಯಲ್ಲಿ ಎರಡು ದಿನ ಬೀಡು ಬಿಟ್ಟಿದ್ದ ಸಿದ್ದರಾಮಯ್ಯ, ಎ.ಕೆ.ಆ್ಯಂಟನಿ ಜತೆ ಮೊದಲಿಗೆ ಮಾತನಾಡಿ ತಳಪಾಯ ಹಾಕಿ ನಂತರ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ, ಸಮ್ಮಿಶ್ರ ಸರ್ಕಾರ ಪತನಗೊಳಿಸಿ ವಿಧಾನಸಭೆ ಚುನಾವಣೆಗೆ ಹೋಗಲು ಬಿಜೆಪಿ ಬಯಸಿರುವುದರಿಂದ ಅಂತಹ ಸನ್ನಿವೇಶ ಸೃಷ್ಟಿಯಾದರೆ ಪಕ್ಷ ಗಟ್ಟಿಯಾಗಿರಬೇಕು. ನಮ್ಮ ಶಾಸಕರು ಬಿಜೆಪಿಗೆ ಹೋಗಲು ನಾವೇ ಬಿಟ್ಟುಕೊಟ್ಟರೆ ಮುಂದೆ ಪಕ್ಷದ ಸ್ಥಿತಿ ಕಷ್ಟವಾಗಲಿದೆ. ಹೀಗಾಗಿಯೇ ನಾವು ಇಬ್ಬರೂ ಪಕ್ಷೇತರರಿಗೆ ಸಚಿವ ಸ್ಥಾನ ನೀಡಿ ಸರ್ಕಾರದ ಭಾಗ ಮಾಡಿಕೊಂಡಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟರು.

Advertisement

ಆಗ ರಾಹುಲ್‌ಗಾಂಧಿ, ಎಂತಹ ಪರಿಸ್ಥಿತಿಯಲ್ಲೂ ನಮ್ಮ ಶಾಸಕರು ಬಿಜೆಪಿಯತ್ತ ಹೋಗಬಾರದು. ಆ ರೀತಿಯ ಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಿ. ಸದ್ಯಕ್ಕೆ ಸರ್ಕಾರ ಉಳಿಸಿಕೊಳ್ಳಬೇಕಾಗಿದೆ. ಹಾಗೆಂದು ಪಕ್ಷದ ಶಾಸಕರು, ಮುಖಂಡರನ್ನು ನಿರ್ಲಕ್ಷ್ಯ ಮಾಡುವುದು ಬೇಡ. ಶಾಸಕರನ್ನು ಹಿಡಿದಿಟ್ಟುಕೊಂಡು ಅವಕಾಶ ಇರುವ ಎಲ್ಲ ರೀತಿಯ ಅಧಿಕಾರ ಕೊಡಿಸಿ. ಮಾಜಿ ಶಾಸಕರು ಹೇಳುವ ಕೆಲಸ ಕಾರ್ಯ ಸರ್ಕಾರದಿಂದ ಮಾಡಿಸಿಕೊಡಿ. ರಮೇಶ್‌ ಜಾರಕಿಹೊಳಿ, ಬಿ.ಸಿ.ಪಾಟೀಲ್‌ ಜತೆಯೂ ಮಾತನಾಡಿ ಪಕ್ಷ ಬಿಡದಂತೆ ಮನವೊಲಿಸಿ ಎಂದು ಸೂಚನೆ ನೀಡಿದರು.

ಸಿದ್ದರಾಮಯ್ಯ ಅವರ ನಂತರ ಭೇಟಿ ಮಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೂ ಇದೇ ರೀತಿಯ ಸಲಹೆ ನೀಡಿದರು. ಬಳ್ಳಾರಿಯ ಶಾಸಕರಾದ ನಾಗೇಂದ್ರ, ಭೀಮಾನಾಯಕ್‌, ಆನಂದ್‌ಸಿಂಗ್‌ ಅವರು ಬಿಜೆಪಿಯತ್ತ ಹೋಗದಂತೆ ತಡೆಯವ ಹೊಣೆಗಾರಿಕೆ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಗೌಡರಿಗೆ ಸುಳಿವು: ರಾಹುಲ್‌ಗಾಂಧಿ-ಸಿದ್ದರಾಮಯ್ಯ ಅವರ ಭೇಟಿಯಲ್ಲಿ ಚರ್ಚೆಯಾದ ವಿಚಾರಗಳ ಸುಳಿವು ದೊರೆತಿರುವುದರಿಂದಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಹ ತಮ್ಮ ಪಕ್ಷ ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ನಿಸರ್ಗ ನಾರಾಯಣಸ್ವಾಮಿಗೆ ಉಪ ನಗರ ವರ್ತುಲ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಐದು ಶಾಸಕರು ಹಾಗೂ ಐವರು ಮಾಜಿ ಶಾಸಕರಿಗೆ ಜೆಡಿಎಸ್‌ ಕೋಟಾದಡಿ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಲು ಕುಮಾರಸ್ವಾಮಿಯವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜತೆಗೆ, ಕಾಂಗ್ರೆಸ್‌ ಅದರಲ್ಲೂ ಸಿದ್ದರಾಮಯ್ಯ ಕೈ ಮೇಲುಗೈ ಆಗದಂತೆ ನೋಡಿಕೊಳ್ಳುವ ಸಲುವಾಗಿಯೇ ಹೇಳಿಕೆಗಳ ಮೂಲಕ ಪರೋಕ್ಷ ಸಂದೇಶ ರವಾನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆ, ಮಧ್ಯಂತರ ಚುನಾವಣೆ ಗುಮ್ಮದ ನಡುವೆಯೇ ಸಮ್ಮಿಶ್ರ ಸರ್ಕಾರ ಉಳಿಸಿಕೊಂಡೇ ಒಂದು ಕಡೆ ಕಾಂಗ್ರೆಸ್‌ ಹಾಗೂ ಮತ್ತೂಂದು ಕಡೆ ಜೆಡಿಎಸ್‌ ತಮ್ಮ ತಮ್ಮ ಪಕ್ಷ ಕಟ್ಟುವ ಕೆಲಸಕ್ಕೆ ಚಾಲನೆ ನೀಡಿವೆ.

ಜನರಿಗೆ ಹತ್ತಿರವಾಗುವ ಕಸರತ್ತು: ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಿನ ಆರು ತಿಂಗಳ ಕಾಲ ನಿರಂತರವಾಗಿ ಗ್ರಾಮವಾಸ್ತವ್ಯ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಸಮ್ಮಿಶ್ರ ಸರ್ಕಾರದ ಕಿತ್ತಾಟದ ಬಗ್ಗೆ ಜನಸಾಮಾನ್ಯರಲ್ಲಿರುವ ಆಕ್ರೋಶ ತಣ್ಣಗಾಗಿಸುವುದು. ಜತೆಗೆ, ಜನರ ವಿಶ್ವಾಸ ಗಳಿಸುವುದು ಇದರ ಉದ್ದೇಶ. ತೀರಾ ಅನಿವಾರ್ಯ ಎಂದಾದರೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ಸಹ ಕುಮಾರಸ್ವಾಮಿಯವರೇ ವಹಿಸಿಕೊಳ್ಳಬಹುದೆಂಬ ಮಾತುಗಳು ಕೇಳಿಬರುತ್ತಿವೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next