ಚಿಕ್ಕಮಗಳೂರು: ನಮ್ಮ ದೇಶದಲ್ಲಿ ತಂದೆಯ ಜಾತಿ ಆಧಾರದಲ್ಲಿ ಜಾತಿ ದೃಢೀಕರಣ ಪತ್ರ ಪಡೆಯುವ ಅವಕಾಶ ಇದೆ. ಆದರೆ, ರಾಹುಲ್ ಗಾಂಧಿ ಅವರು “ತಾವು ಬ್ರಾಹ್ಮಣ’ ಎಂದು ಯಾವಾಗ ಜಾತಿ ದೃಢೀಕರಣ ಪತ್ರ ಪಡೆದುಕೊಂಡಿದ್ದರು ಎಂಬುದು ತಿಳಿಯುತ್ತಿಲ್ಲ ಎಂದು ಸಂಸದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯವೊಂದರಲ್ಲಿ ತಾವು ಕೌಲ್ ಬ್ರಾಹ್ಮಣ, ತಮ್ಮದು ದತ್ತಾತ್ರೇಯ ಗೋತ್ರ ಎಂದು ರಾಹುಲ್ ಗಾಂಧಿ ನಮೂದಿಸಿದ್ದಾರೆ. ಆದರೆ, ಜಾತಿ ಪ್ರಮಾಣ ಪತ್ರವನ್ನು ಯಾವಾಗ, ಯಾರಿಂದ ಪಡೆದಿದ್ದರು ಎಂಬುದೇ ತಿಳಿದಿಲ್ಲ ಎಂದರು.
ತಂದೆಯ ಜಾತಿ ಆಧಾರದಲ್ಲಿ ಮಕ್ಕಳು ಜಾತಿ ದೃಢೀಕರಣ ಪತ್ರ ಪಡೆಯೋದನ್ನು ಈ ದೇಶದ ಕಾನೂನು ಸಹ ಹೇಳುತ್ತದೆ. ಆದರೆ, ರಾಹುಲ್ ಗಾಂಧಿಗೆ ಬ್ರಾಹ್ಮಣ ಎಂದು ಜಾತಿ ದೃಢೀಕರಣ ಪತ್ರ ಯಾವಾಗ ದೊರಕಿತ್ತು ಎಂಬುದು ತಿಳಿದಿಲ್ಲ. ರಾಜಕೀಯ ಕಾರಣಕ್ಕಾಗಿ ಯಾರು ಏನು ಬೇಕಾದರೂ ಮಾತನಾಡಬಹುದು ಎಂಬುದನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತೋರಿಸಿಕೊಡುತ್ತಿದೆ. ಇಂತಹ ಪರಿಸ್ಥಿತಿ ರಾಷ್ಟ್ರೀಯ ಪಕ್ಷವೊಂದಕ್ಕೆ ಬಂದಿರುವುದು ನಾಚಿಕೆಗೇಡು ಎಂದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಾಗಲೂ ರಾಹುಲ್ ಗಾಂಧಿ ಟೆಂಪಲ್ ರನ್ ಮಾಡಿದ್ದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮಹಾಘಟಬಂಧನ್‌ಗೆ ಮುಂದಾಗಿದೆ. ಆದರೆ, ದಿನದಿಂದ ದಿನಕ್ಕೆ ಒಂದೊಂದೇ ಕೊಂಡಿ ಕಳಚಿ ಹೋಗುತ್ತಿದೆ. ಮತ್ತೂಮ್ಮೆ ಎನ್‌ಡಿಎ ಸರ್ಕಾರವೇ ಆಡಳಿತಕ್ಕೆ ಬರಲಿದೆ ಎಂಬ ಅಂಶ ಗೋಚರಿಸುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳಿಗೆ ಹೆದರಿಕೆ ಆರಂಭವಾಗಿದೆ ಎಂದು ಹೇಳಿದರು.