ಶಾರ್ಜಾ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 46ನೇ ಪಂದ್ಯ ಇಂದು ಶಾರ್ಜಾದಲ್ಲಿ ನಡೆಯುತ್ತಿದೆ. ಕಳೆದ ಆವೃತ್ತಿಯ ಫೈನಲಿಸ್ಟ್ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅಮೂಲ್ಯ ಎರಡು ಅಂಕಗಳಿಗಾಗಿ ಸೆಣಸಾಟ ನಡೆಸುತ್ತಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಬೌಲಿಂಗ್ ಮಾಡಲು ನಿರ್ಧರಿಸಿದೆ. ಎರಡೂ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಡೆಲ್ಲಿ ಪರ ಲಲಿತ್ ಯಾದವ್ ಬದಲಿಗೆ ಪೃಥ್ವಿ ಶಾ ಆಯ್ಕೆಯಾದರೆ, ಮುಂಬೈ ಬಳಗದಲ್ಲಿ ಸ್ಪಿನ್ನರ್ ರಾಹುಲ್ ಚಾಹರ್ ಬದಲಿಗೆ ಜಯಂತ್ ಯಾದವ್ ಸ್ಥಾನ ಪಡೆದಿದ್ದಾರೆ.
ಯುಜುವೇಂದ್ರ ಚಾಹಲ್ ಬದಲಿಗೆ ಟಿ20 ವಿಶ್ವಕಪ್ ಗೆ ಆಯ್ಕೆಯಾಗಿದ್ದ ರಾಹುಲ್ ಚಾಹರ್ ಅವರ ಪ್ರದರ್ಶನ ಐಪಿಎಲ್ ನ ಯುಎಇ ಲೆಗ್ ನಲ್ಲಿ ತೀರಾ ಕುಸಿದಿದೆ. ಭಾರತದಲ್ಲಿ ನಡೆದ ಮೊದಲಾರ್ಧದ ಕೂಟದಲ್ಲಿ ಏಳು ಪಂದ್ಯಗಳಿಂದ 11 ವಿಕೆಟ್ ಕಬಳಿಸಿದ್ದ ಚಾಹರ್, ಯುಎಇ ನಲ್ಲಿ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ.
ಇದನ್ನೂ ಓದಿ:ನಟಿ ರಶ್ಮಿಕಾ ಹೊಸ ಮನೆ ಖರೀದಿಸಿದ್ದಕ್ಕೆ ಹೊಟ್ಟೆಕಿಚ್ಚು ಪಟ್ಟಿದ್ದು ಯಾರು ?
ಯುಎಇ ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಚಾಹರ್ ಪಡೆದಿದ್ದು ಕೇವಲ ಎರಡು ವಿಕೆಟ್. 7.73ರ ಎಕಾನಮಿಯಲ್ಲಿ ಚಾಹರ್ ಬೌಲಿಂಗ್ ಮಾಡಿದ್ದಾರೆ. ಮತ್ತೊಂದೆಡೆ ವಿಶ್ವಕಪ್ ನಲ್ಲಿ ಸ್ಥಾನ ಪಡೆಯದ ಯುಜುವೇಂದ್ರ ಚಾಹಲ್ ಯುಎಇ ಚರಣದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಚಾಹಲ್ ಆಡಿದ ನಾಲ್ಕು ಪಂದ್ಯಗಳಲ್ಲಿ 11.4ರ ಸರಾಸರಿಯಲ್ಲಿ ಏಳು ವಿಕೆಟ್ ಪಡೆದಿದ್ದಾರೆ.
ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಹಲವು ಆಟಗಾರರು ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡುತ್ತಿದ್ದಾರೆ. ಇಶಾನ್ ಕಿಶನ್ ಅವರಿಗೆ ತಂಡದಲ್ಲಿ ಸ್ಥಾನವೂ ಸಿಗುತ್ತಿಲ್ಲ. ಮತ್ತೋರ್ವ ಆಟಗಾರ ಸೂರ್ಯ ಕುಮಾರ್ ಯಾದವ್ ಬ್ಯಾಟ್ ನಿಂದ ಕೂಡಾ ರನ್ ಬರುತ್ತಿಲ್ಲ.