Advertisement

ರಾಹುಲ್ ಕರ್ನಾಟಕದಿಂದ ಸ್ಪರ್ಧಿಸಬಹುದಿತ್ತಲ್ಲ?

06:39 AM May 09, 2019 | Team Udayavani |

••ರಾಹುಲ್ ಗಾಂಧಿ ವಯನಾಡ್‌ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಇದನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದೆ. ನೀವೇನಂತೀರಿ?

Advertisement

ತಾನು ಬಿಜೆಪಿಯ ವಿರುದ್ಧ ಹೋರಾಡುತ್ತಿರು ವುದಾಗಿ ಹೇಳುತ್ತಿರುವ ರಾಷ್ಟ್ರೀಯ ಪಕ್ಷವೊಂದು, ವಯನಾಡ್‌ನ‌ಲ್ಲಿ ತನ್ನ ಅಧ್ಯಕ್ಷರನ್ನು ಕಣಕ್ಕಿಳಿಸಿದ್ದನ್ನು ನೋಡಿ ಆಶ್ಚರ್ಯವಾಗುತ್ತಿದೆ. ಏಕೆಂದರೆ ವಯನಾಡ್‌ನ‌ಲ್ಲಿ ಬಿಜೆಪಿಗೆ ಅಂಥ ಮಹತ್ವವೇ ಇಲ್ಲ. ಸತ್ಯವೇನೆಂದರೆ, ಬಿಜೆಪಿಯಿಂದ ಅಭ್ಯರ್ಥಿ ಗಳೇ ಇಲ್ಲ. ಇಲ್ಲಿ ಸ್ಪರ್ಧೆ ಇದ್ದದ್ದು ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ ನಡುವೆ ಮಾತ್ರ. ಈಗ ಎಡಪಕ್ಷಗಳ ವಿರುದ್ಧ ರಾಹುಲ್ರನ್ನು ಕಣಕ್ಕಿಳಿಸಿ ಅದ್ಯಾವ ಸಂದೇಶವನ್ನು ಕಳುಹಿಸಲು ಪ್ರಯತ್ನಿಸುತ್ತಿದೆ ದೆಹಲಿಯ ಕಾಂಗ್ರೆಸ್‌ನಾಯಕತ್ವ? ಈ ಪ್ರಶ್ನೆಗೆ ರಾಹುಲ್ ಆಗಲಿ ಅಥವಾ ಕಾಂಗ್ರೆಸ್‌ನ ಇನ್ನಿತರೆ ನಾಯಕರಾಗಲಿ ಸಮಂಜಸ ಉತ್ತರ ನೀಡಿಲ್ಲ. ವಯನಾಡ್‌ನ‌ಲ್ಲಿ ರಾಹುಲ್ರ ಸ್ಪರ್ಧೆಯಿಂದಾಗಿ ಇಡೀ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಬಲಿಷ್ಠಗೊಳ್ಳುತ್ತದೆ ಎಂದು ಕೆಲವರು ಹೇಳುತ್ತಾರೆ. ಈ ಹೇಳಿಕೆಗೆ ತಳಬುಡವಿಲ್ಲ. ಇದು ಕಾಂಗ್ರೆಸ್‌ನ ಮೂರ್ಖ ನಿರ್ಧಾರ.

ಸತ್ಯವೇನೆಂದರೆ, ಈ ನಿರ್ಧಾರವು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ನ ‘ಬಿಜೆಪಿ ವಿರೋಧಿ’ ನಿಲುವಿಗೆ ಧಕ್ಕೆ ಉಂಟುಮಾಡಿದೆ. ಒಂದರ್ಥದಲ್ಲಿ ಕಾಂಗ್ರೆಸ್‌ನವರು ಬಿಜೆಪಿಗೆ ಕೈಯ್ನಾರೆ ಅಸ್ತ್ರ ಒದಗಿಸಿ ದ್ದಾರೆ. ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲು ತ್ತೇನೆಂದು ಹೆದರಿ ವಯನಾಡ್‌ನ‌ಲ್ಲಿ ಆಶ್ರಯ ಪಡೆದರು ಎಂಬ ಭಾವನೆ ಸೃಷ್ಟಿಯಾಗಿದೆ. ಒಂದು ವೇಳೆ ರಾಹುಲ್ಗೆ ಏನಾದರೂ ಬಿಜೆಪಿಯೊಂದಿಗೆ ಹೋರಾಡುವ ಪ್ರಾಮಾಣಿಕ ಬಯಕೆ ಇದ್ದಿದ್ದರೆ, ಅವರು ಕರ್ನಾಟಕದಿಂದ ಸ್ಪರ್ಧಿಸಬಹುದಿತ್ತು. ಏಕೆಂದರೆ ಅಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.

••ಇದರಿಂದಾಗಿ ಬಿಜೆಪಿ ವಿರೋಧಿ ಹೋರಾಟಕ್ಕೆ ಪೆಟ್ಟು ಬೀಳುತ್ತಿದೆ ಎಂದು ಭಾವಿಸುತ್ತೀರಾ?

ಕಾಂಗ್ರೆಸ್‌ನ ಅಹಂಕಾರ ಮತ್ತು ಅವಾಸ್ತವಿಕ ಮಾತುಗಳು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರೋಧಿ ಆಂದೋಲನವನ್ನು ದುರ್ಬಲ ಗೊಳಿಸಿದೆ. ಉತ್ತರಪ್ರದೇಶದಲ್ಲಿ ಏನಾಯಿತೆಂದು ನಿಮಗೇ ಗೊತ್ತಿದೆ. ಇದರಿಂದಾಗಿ ಬಿಜೆಪಿಗೇ ಪರೋಕ್ಷವಾಗಿ ಲಾಭವಾಗಲಿದೆ. ದೆಹಲಿಯಲ್ಲೂ ಹಾಗೇ ಆಯಿತು. ಅಲ್ಲಿ ಕಾಂಗ್ರೆಸ್‌ ಆಪ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿತು. ಬಿಜೆಪಿ ವಿರುದ್ಧದ ಹೋರಾಟವನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ನನಗನಿಸುತ್ತದೆ. ಈಗ ದೇಶಾದ್ಯಂತ ಅದು ಸಾಫ್ಟ್ ಹಿಂದುತ್ವವನ್ನು ಬಳಸುತ್ತಿದೆ. ಮಧ್ಯಪ್ರದೇಶ ದಲ್ಲಂತೂ ಗೋವುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಕಾಯ್ದೆ) ಬಳಸುತ್ತಿದೆ.

Advertisement

••ಶಬರಿಮಲೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಚುನಾವಣಾ ವಿಷಯವಾಗಿಸಿಕೊಂಡದ್ದು ಏಕೆ?

ಏಕೆಂದರೆ ಐದು ವರ್ಷಗಳಿಂದ ದೇಶವನ್ನಾಳಿರುವ ಬಿಜೆಪಿಗೆ ತೋರಿಸಿಕೊಳ್ಳಲು ಯಾವ ಸಾಧನೆಯೂ ಇಲ್ಲ. ಹೀಗಾಗಿ ಅವರು ಕೇರಳದಲ್ಲಿ ಶಬರಿಮಲೆ ವಿಷಯವನ್ನು, ಉತ್ತರ ಪ್ರದೇಶದಲ್ಲಿ ಅಯೋ ಧ್ಯೆಯ ವಿಷಯವನ್ನು ಮಾತನಾಡುತ್ತಿದ್ದಾರೆ. ದುರದೃಷ್ಟವಶಾತ್‌, ಕಾಂಗ್ರೆಸ್‌ ಕೂಡ ರಾಜಕೀಯ ಲಾಭ ಮಾಡಿಕೊಳ್ಳಲು ಕೋಮುಭಾವನೆಗಳನ್ನು ಪ್ರಚೋದಿಸುತ್ತಿದೆ. ಕೇರಳ ಜನರಿಗೆ ಇವರ ಆಟ ಅರ್ಥವಾಗಿದೆ ಎಂದು ನನಗೆ ಖಾತ್ರಿಯಿದೆ.

••ಬಿಜೆಪಿಯ ಪಿಎಂ ಕಿಸಾನ್‌ ಯೋಜನೆ ಹಾಗೂ ಕಾಂಗ್ರೆಸ್‌ನ ‘ನ್ಯಾಯ್‌’ ಯೋಜನೆಯ ಭರವಸೆ ಗಳು ಚುನಾವಣೆಯಲ್ಲಿ ಬಹಳ ಸದ್ದು ಮಾಡುತ್ತಿವೆ. ಇವು ವಾಸ್ತವಿಕ ಎಂದು ನಿಮಗನಿಸುತ್ತದಾ?

ಇವು ಬರೀ ಚುನಾವಣಾ ಗಿಮಿಕ್‌ಗಳಷ್ಟೇ. ಇಂದು ನಮ್ಮ ಕೃಷಿ ವಲಯ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ದೇಶದ ಅನೇಕ ಭಾಗಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೋದಿ ಸರ್ಕಾರ ಕೃಷಿ ವಲಯವನ್ನು ಸಂಪೂರ್ಣವಾಗಿ ಕಡೆಗಣಿಸಿತು. ಸಾರ್ವಜನಿಕ ವಲಯದ ಬ್ಯಾಂಕುಗಳು ದೊಡ್ಡ ದೊಡ್ಡ ಕಾರ್ಪೊರೇಟುಗಳ ಲಕ್ಷಾಂತರ ಕೋಟಿ ಸಾಲವನ್ನು ಮಾಫಿ ಮಾಡಿಬಿಟ್ಟವು, ಆದರೆ ಮೋದಿ ಸರ್ಕಾರ ರೈತರನ್ನು ಮಾತ್ರ ಬೆಂಬಲಿಸಲಿಲ್ಲ. ಕಳೆದ 14 ವರ್ಷಗಳಲ್ಲೇ ಕೃಷಿ ಆದಾಯ ಬೆಳವಣಿಗೆ ಅತಿ ಕೆಳ ಮಟಕ್ಕೆ ಕುಸಿದಿದೆ(2018ರ ಕೊನೆಯ ತ್ತೈಮಾಸಿಕದಲ್ಲಿ 2.67 ಪ್ರತಿಶತ).

ಅನೇಕ ರಾಜ್ಯಗಳಲ್ಲಿ ರೈತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಚುನಾವಣೆಗಳು ಹತ್ತಿರವಾಗು ತ್ತಿದ್ದಂತೆಯೇ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್‌ ಸ್ಕೀಂ ಘೋಷಿಸಿತು. ಆದರೆ ಇಂಥ ಯೋಜನೆಗಳಿಂದ ಕೃಷಿ ವಲಯದ ಬಿಕ್ಕಟ್ಟು ಪರಿಹಾರವಾಗುವುದಿಲ್ಲ.

ಇನ್ನು ಕಾಂಗ್ರೆಸ್‌ನ ‘ನ್ಯಾಯ್‌’ ಕೂಡ ಇನ್ನೊಂದು ಚುನಾವಣಾ ಗಿಮಿಕ್‌ ಅಷ್ಟೇ. ಇದೇ ಪಕ್ಷ ದಶಕಗಳ ಹಿಂದೆ ‘ಗರೀಬಿ ಹಠಾವೋ’ ಘೋಷಣೆ ಕೂಗಿತ್ತಲ್ಲವೇ? ಕಾಂಗ್ರೆಸ್‌ ಏನಾದರೂ ತನ್ನ ಭರವಸೆಯನ್ನು ಈಡೇರಿಸಿದ್ದರೆ, ಈಗ ಇಂಥ ಪೊಳ್ಳು ಭರವಸೆಗಳನ್ನು ನೀಡುವ ಅಗತ್ಯ ಎದುರಾಗುತ್ತಿರಲಿಲ್ಲ.

••ಚುನಾವಣೋತ್ತರ ಸನ್ನಿವೇಶದಲ್ಲಿ ಎಡರಂಗ ಯಾವ ಪಾತ್ರ ನಿರ್ವಹಿಸಬಹುದು?

ಭಾರತೀಯ ಜನತಾ ಪಾರ್ಟಿಯು ಅಧಿಕಾರ ಕಳೆದುಕೊಳ್ಳುತ್ತದೆ ಮತ್ತು ಕೇಂದ್ರದಲ್ಲಿ ಪರ್ಯಾಯ ಜಾತ್ಯತೀತ ಶಕ್ತಿ ಬರುತ್ತದೆ ಎಂಬುದು ನನ್ನ ಭರವಸೆ. ಲೋಕಸಭೆಯಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಸಿಪಿಐ-ಎಂ ಕೂಡ ಪ್ರಯತ್ನಿಸುತ್ತಿದೆ. ಕೋಮುವಾದಿ ವಿರೋಧಿ ಶಕ್ತಿಗಳಿಗೆ ನಾವು ಬೆಂಬಲವನ್ನು ಮುಂದುವರಿಸಲಿ ದ್ದೇವೆ. ಯುಪಿಎ-1ರ ಅವಧಿಯಲ್ಲಿ ಏನಾಯಿತೆಂ ಬುದರ ಅನುಭವ ಜನಕ್ಕೆ ಆಗಿದೆ. ಸತ್ಯವೇನೆಂದರೆ, ಕಾಂಗ್ರೆಸ್‌ ಪಕ್ಷವು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ವನ್ನು (ಸಿಎಂಪಿ)ಕಡೆಗಣಿಸಲು ಅಥವಾ ಉಲ್ಲಂಘಿ ಸಲು ನಡೆಸಿದ ಯತ್ನವನ್ನೆಲ್ಲ ನಾವು ತಡೆದೆವು. ಇನ್ನು ಯುಪಿಎ-2 ಅವಧಿಯಲ್ಲಿ ಏನಾಯಿತು ಎಂದು ವಿವರಿಸಬೇಕಿಲ್ಲ ಎಂದು ಭಾವಿಸುತ್ತೇನೆ. ಆಗ ಕೇಂದ್ರ ಸರ್ಕಾರ ಭಷ್ಟ್ರಾಚಾರದಲ್ಲಿ ಮುಳುಗಿಹೋಯಿತು ಮತ್ತು ನವ-ಉದಾರ ನೀತಿಗಳನ್ನು ಆಕ್ರಮಣಶೀಲವಾಗಿ ಅನುಸರಿಸಿತು.

ಈ ಸಂಗತಿಯೇ ಅಲ್ಲವೇ ಬಿಜೆಪಿಯು 2014ರಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದು. ನಾವು ಬಿಜೆಪಿಯ ಪರ್ಯಾಯ ಶಕ್ತಿ ಬಗ್ಗೆ ಚರ್ಚಿಸು ವಾಗೆಲ್ಲ, ಹಿಂದೆ ಏನಾಯಿತು ಎನ್ನುವುದನ್ನು ಮರೆಯಬಾರದು.

••ಬಿಜೆಪಿ ಹೈಲೈಟ್ ಮಾಡುತ್ತಿರುವ ಮತ್ತೂಂದು ಪ್ರಮುಖ ವಿಚಾರವೆಂದರೆ ಕೇರಳದಲ್ಲಿನ ರಾಜಕೀಯ ಹಿಂಸಾಚಾರ. ಏನನ್ನುತ್ತೀರಿ?

ನಿಮಗೆ ಗೊತ್ತಿರುವಂತೆ, ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡುವಲ್ಲಿ ಬಿಜೆಪಿಯ ಯಂತ್ರ ಸುಲಲಿತವಾಗಿ ಕೆಲಸ ಮಾಡುತ್ತದೆ. ರಾಜಕೀಯ ಹಿಂಸಾಚಾರ ನಡೆಯುತ್ತಿದೆ ಎನ್ನುವುದು ಕೂಡ ಈ ವದಂತಿಗಳ ಭಾಗವೇ ಆಗಿದೆ. ಕೇರಳವು ದೇಶದಲ್ಲೇ ಅತ್ಯಂತ ಶಾಂತಿಯುತ ರಾಜ್ಯ. ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಬಂದರೆ ಕೇರಳ ಉನ್ನತ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿ ಅಲ್ಲಿಲ್ಲಿ ಇಂಥ ಘಟನೆಗಳು ನಡೆಯುತ್ತಿರಬಹುದು, ಹಾಗೆ ಆದಾಗಲೆಲ್ಲ ರಾಜ್ಯ ಸರ್ಕಾರ ‘ಆಪಾದಿತ’ ಯಾರು ಎನ್ನುವುದನ್ನು ನೋಡದೇ ಕಠಿಣ ಕ್ರಮ ಕೈಗೊಂಡಿದೆ. ನೀವು ಗಮನವಿಟ್ಟು ನೋಡಿದಾಗ, ಅನೇಕ ಹಿಂಸಾಚಾರ ಪ್ರಕರಣಗಳ ಹಿಂದೆ ಆರ್‌ಎಸ್‌ಎಸ್‌ ಕೈವಾಡವಿರುವುದು ಗೋಚರಿಸುತ್ತದೆ.

ಸಂದರ್ಶನ
ಪಿಣರಾಯಿ ವಿಜಯನ್‌

Advertisement

Udayavani is now on Telegram. Click here to join our channel and stay updated with the latest news.

Next