ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಮುದಾಯವಾರು ಸಮಾವೇಶಗಳನ್ನು ಆಯೋಜಿಸುವ ಸಿದ್ದರಾಮಯ್ಯ ಪ್ರಸ್ತಾವಕ್ಕೆ ರಾಹುಲ್ ಗಾಂಧಿ ಹಸುರು ನಿಶಾನೆ ತೋರಿದ್ದಾರೆ.
ಆದರೆ ಕೆಪಿಸಿಸಿ ಅಧ್ಯಕ್ಷರ ಸಹಿತ ರಾಜ್ಯದ ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಮಾವೇಶಗಳು ಪಕ್ಷಕ್ಕೆ ಪರ್ಯಾಯ ಎಂಬ ಸಂದೇಶ ರವಾನೆಯಾಗಬಾರದು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮುದಾಯಗಳ ನೋವಿಗೆ, ಸಮಸ್ಯೆಗಳಿಗೆ ಧ್ವನಿಯಾಗಿ ಸಮಾವೇಶ ಆಯೋಜಿಸಲು ಅಥವಾ ಆಯೋಜನೆಯಾಗುವ ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಅಡ್ಡಿಯಿಲ್ಲ ಎಂದು ರಾಹುಲ್ ಸೂಚಿಸಿದ್ದಾರೆ. ಸೋನಿಯಾ ಗಾಂಧಿಯವರಿಗೂ ಮನವರಿಕೆ ಮಾಡಿಕೊಟ್ಟು ಒಪ್ಪಿಗೆ ಕೊಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಮತ್ತು ತಾ.ಪಂ. ಚುನಾವಣೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆ ಮತ್ತು ಕಾಂಗ್ರೆಸ್‌ನಿಂದ ದೂರವಾಗಿರುವ ಸಮುದಾಯಗಳ ವಿಶ್ವಾಸ ಗಳಿಸಲು ಸಮಾವೇಶ ಅನಿವಾರ್ಯ ಕುರಿತು ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.
ಮೀಸಲಾತಿ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಮತ್ತು ಹೋರಾಟಗಳು ಹಲವು ಸಮುದಾಯಗಳಲ್ಲಿ ಆತಂಕ ಮೂಡಿಸಿವೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ ಎಂದೂ ಚರ್ಚೆಯಾಯಿತು. ಹಿಂದುಳಿದ, ಅಲ್ಪಸಂಖ್ಯಾಕ, ದಲಿತ ಸಮುದಾಯಗಳ ಒಗ್ಗೂಡಿಸುವಿಕೆ ಬಗ್ಗೆಯೂ ಪ್ರಸ್ತಾವವಾಯಿತು ಎಂದು ತಿಳಿದುಬಂದಿದೆ.
ಹಿರಿಯ ನಾಯಕರ ಭೇಟಿ
ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಕೆ.ಸಿ. ವೇಣುಗೋಪಾಲ್, ಎ.ಕೆ. ಆ್ಯಂಟನಿ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.