Advertisement

ಸ್ಯಾಂಡಲ್‌ವುಡ್‌ ಡ್ರಗ್‌ ಜಾಲ : ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಪೂರ್ಣ

11:34 PM Oct 24, 2020 | sudhir |

ಬೆಂಗಳೂರು : ಸ್ಯಾಂಡಲ್‌ವುಡ್‌ ಡ್ರಗ್‌ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಹಾಗೂ ಸಂಜನಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟಿನ ನ್ಯಾ| ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ತೀರ್ಪನ್ನು ಕಾದಿರಿಸಿದೆ.

Advertisement

ಸಂಜನಾ ಪರ ವಾದಿಸಿದ ಹಸ್ಮತ್‌ ಪಾಷಾ ಅವರು, ಸಂಜನಾ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲ ಹಾಗೂ ಎನ್‌ಡಿಪಿಎಸ್‌ ಕಾಯ್ದೆಯ ನಿಯಮಗಳನ್ನು ಸಿಸಿಬಿ ಪೊಲೀಸರು ಸರಿಯಾಗಿ ಪಾಲಿಸಿಲ್ಲ. ಸಂಜನಾರ ಮನೆಯಿಂದ ಯಾವುದೇ ಮಾದಕವಸ್ತು ಪತ್ತೆಯಾಗಿಲ್ಲ. ಆದ್ದರಿಂದ ಅಮಾಯಕಳಾಗಿರುವ ಆಕೆಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ರಾಗಿಣಿ ಪರ ವಾದಿಸಿದ ಜಯಕುಮಾರ್‌ ಎಸ್‌. ಪಾಟೀಲ್‌ ಅವರು, ಪ್ರಕರಣದಲ್ಲಿ ರಾಗಿಣಿ ಅಮಾಯಕಿ. ಇವರ ವಿರುದ್ಧ ಸಿಸಿಬಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ತನಿಖೆಗೆ ಸಹಕಾರ ನೀಡಿದ್ದಾರೆ. ಒಂದೂ ವರೆ ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನು ನೀಡಬೇಕೆಂದು ವಿನಂತಿಸಿದರು.

ಇವುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಸಿಸಿಬಿ ಪರ ಎಸ್‌ಪಿಪಿ ವೀರಣ್ಣ ತಿಗಡಿ ಅವರು, ಎಲ್ಲ ಆರೋಪಿಗಳೂ ಸಾಕಷ್ಟು ಪ್ರಭಾವಿಗಳಾಗಿದ್ದಾರೆ. ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುತ್ತಾರೆ. ಕೆಲವರಂತೂ ಪೊಲೀಸರ ಮೇಲೆಯೇ ಪ್ರಭಾವ ಬಳಸಿದ್ದಾರೆ. ಈಗಾಗಲೇ ಸಿಸಿಬಿಯ ಎಸಿಪಿ ಹಂತದ ಅಧಿಕಾರಿಯೊಬ್ಬರನ್ನು ಮಾಹಿತಿ ಸೋರಿಕೆ ಆರೋಪದಡಿ ಅಮಾನತು ಮಾಡಲಾಗಿದೆ. ಕೆಲವು ಪ್ರಮುಖ ಆರೋಪಿಗಳು ಈಗಲೂ ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಿದ ಬಳಿಕ ಇನ್ನಷ್ಟು ಮಾಹಿತಿ ದೊರೆಯಲಿದೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ, ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next