Advertisement

ಅದಮ್ಯ ಕನಸುಗಾರನ ಆದರ್ಶ ಗ್ರಾಮ ರಾಗಿಹಳ್ಳಿ

10:56 AM Nov 13, 2018 | |

ಆನೇಕಲ್‌: ಅನಂತ ಕುಮಾರ್‌ರ ಕನಸಿನ ಗ್ರಾಮದಲ್ಲೂ ಸೂತಕದ ಛಾಯೆ ಆವರಿಸಿತ್ತು. 4 ವರ್ಷಗಳಿಂದ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅನಂತಕುಮಾರ್‌ ಆನೇಕಲ್‌ ತಾಲೂಕಿನ ರಾಗಿಹಳ್ಳಿ ಗ್ರಾಪಂ ಅನ್ನು ಆದರ್ಶ ಗ್ರಾಮವನ್ನಾಗಿಸಲು ಪಣ ತೊಟ್ಟಿದ್ದರು.

Advertisement

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ರಾಗಿಹಳ್ಳಿ ಗ್ರಾಮ ತಾಲೂಕಿನಲ್ಲೇ ಅತ್ಯಂತ ಬಡ ಪಂಚಾಯ್ತಿಯಾಗಿ ಗುರುತಿಸಲಾಗಿದೆ. ಇಂತಹ ಗ್ರಾಮವನ್ನು ರಾಜ್ಯಕ್ಕೆ ಮಾದರಿಯಾಗಿ ಮಾಡಲು ಸಂಸದ ಅನಂತಕುಮಾರ್‌ ಉದ್ದೇಶಿಸಿದ್ದರು. ಸುತ್ತಲೂ ಕಾಡು ಆವರಿಸಿದ್ದು, ಸುಮಾರು 16 ಪುಟ್ಟ ಪುಟ್ಟ ಹಳ್ಳಿಗಳಿಂದ ಪಂಚಾಯ್ತಿ ಕೂಡಿತ್ತು. ಇಲ್ಲಿನ ವಾಸಿಗಳು ತೀರಾ ಹಿಂದುಳಿದಿದ್ದರಿಂದ ಸರ್ವತೋಮುಖ ಪ್ರಗತಿಗೆ ಮುಂದಾಗಲು ಇದೇ ಪಂಚಾಯ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ಅನಂತ ಕುಮಾರ್‌ ಅವರು ರಾಗಿಹಳ್ಳಿ ಪಂಚಾಯ್ತಿಯನ್ನು ಆಯ್ಕೆ ಮಾಡಿ ಕೊಂಡ ಬಳಿಕ ಇಲ್ಲಿನ ಹಳ್ಳಿಗಳ, ಪ್ರತಿ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಪ್ರಗತಿಗೆ ಏನೆಲ್ಲಾ ಸೌಲಭ್ಯ ಕಲ್ಪಿಸಬೇಕು ಎಂಬುದರ ಬಗ್ಗೆ ಅಧ್ಯಯನ ಮಾಡಿಸಿ ಅದರಂತೆ ಹಂತ ಹಂತವಾಗಿ ಹಳ್ಳಿಗರ ಸೇವೆಗೆ ಮುಂದಾಗಿದ್ದರು. 

ಆರಂಭದಲ್ಲಿ ರಸ್ತೆ ಪಕ್ಕದಲ್ಲಿ ಸಸಿ ನೆಟ್ಟು ಪೋಷಿಸುವುದು, ಪ್ರತಿ ಹಳ್ಳಿಗಳಲ್ಲಿ ಸ್ವತ್ಛತೆ ಬಗ್ಗೆ ಅರಿವು ಮೂಡಿಸಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಟ್ಟು ಸ್ವತ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ನಂತರ ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಹಳ್ಳಿಗರಿಗೆ ಕೊಡಿಸುವುದರ ಬಗ್ಗೆ ಚಿಂತನೆ ನಡೆಸಿ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಬಂದು ಸರ್ಕಾರಿ ಸೌಲಭ್ಯಗಳ ಬಗ್ಗೆ ನೇರವಾಗಿ ಮಾಹಿತಿ ಕೊಡಿಸಿ ಅರ್ಜಿ ಪಡೆಯುವ ವ್ಯವಸ್ಥೆ ಮಾಡಿದರು. ಹೀಗೆ ರಾಜ್ಯಕ್ಕೆ ಮಾದರಿಯಾಗಿ ಆದರ್ಶ ಗ್ರಾಮ ಮಾಡಲು ಪಣ ತೊಟ್ಟಿದ್ದ ಅನಂತ ಕುಮಾರ್‌ರ ಬಗ್ಗೆ ಅತಿ ಹೆಚ್ಚು ನಿರೀಕ್ಷೆಗಳನ್ನು ಸ್ಥಳೀಯರು ಇಟ್ಟು ಕೊಂಡಿದ್ದರು. ಇದರ ನಡುವೆ ಅವರ ಅಕಾಲಿಕ ನಿಧನದಿಂದ ಇಡೀ ಗ್ರಾಪಂ ಶೋಕ ಸಾಗರದಲ್ಲಿದೆ.

ಗ್ರಾಮಕ್ಕೆ ಬೆಳಕು ನೀಡಲು ಬಂದವರ ಬದುಕು ಕತ್ತಲೆಯಲ್ಲಿ ಲೀನವಾಯಿತೇ ಎಂಬಂತಾಗಿದೆ. ಇಲ್ಲಿನ ಗ್ರಾಮದ ಯುವ ಮುಖಂಡ ಮುನಿರಾಜು ಮಾತನಾಡಿ, ಅನಂತಕುಮಾರ್‌ ಅವರು ನಮ್ಮ ಗ್ರಾಮಕ್ಕೆ ಬಂದಾಗ ನಮಗೆ ಅವರ ಪರಿಚಯ ಆಗಿರಲಿಲ್ಲ. ಎಲ್ಲಾ ರಾಜಕಾರಣಿಗಳಂತೆ ಇವರೂ ಆಶ್ವಾಸನೆ ಕೊಟ್ಟು ಹೋಗುವವರು ಅಂದು ಕೊಂಡಿದ್ದೆವು. ಆದರೆ, ಅವರ ಕಾಳಜಿ, ಉದ್ದೇಶ ದೊಡ್ಡದಿತ್ತು. ಅವರ ಅಕಾಲಿಕ ಮರಣದಿಂದ ನೋವುಂಟಾಗಿದೆ. ನಮ್ಮ ಗ್ರಾಮವನ್ನು ಆದರ್ಶಮಯವಾಗಿಸುವ ಕನಸು ಕನಸಾಗಿಯೇ ಉಳಿಯಿತು ಎಂದು ನೊಂದು ನುಡಿದರು. 

Advertisement

 ಮಂಜುನಾಥ್‌ ಆನೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next