Advertisement

ರಾಗಿಗುಡ್ಡ ಜೈವಿಕ ವೈವಿಧ್ಯತಾ ತಾಣವಾಗಿ ಉಳಿಸಿ

01:57 PM Aug 01, 2020 | mahesh |

ಶಿವಮೊಗ್ಗ: ನಗರದ ರಾಗಿಗುಡ್ಡ ಪ್ರದೇಶವನ್ನು ಜೈವಿಕ ವೈವಿಧ್ಯತಾ ತಾಣವಾಗಿ ಉಳಿಸಿಕೊಳ್ಳುವ ಕುರಿತು ಪರಿಸರ ಆಸಕ್ತರು ಹಾಗೂ ಹೋರಾಟಗಾರರು ಶುಕ್ರವಾರ ಸಚಿವ ಕೆ. ಎಸ್‌. ಈಶ್ವರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದ್ದು, ದಿನೇ ದಿನೇ ಹೊಸ ಹೊಸ ಬಡಾವಣೆಗಳು ನಗರ ಪ್ರದೇಶವನ್ನು ವಿಸ್ತರಿಸುತ್ತಿವೆ. ನಗರದೊಳಗಿನ ಹಲವಾರು ಕೆರೆಗಳು ನಾಶವಾಗಿ ಹೋಗಿವೆ. ಹೆಚ್ಚಾಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡಲು ಇಕ್ಕೆಲಗಳ ಮರಗಳನ್ನು ಬಲಿ ತೆಗೆದುಕೊಂಡು ರಸ್ತೆಗಳು ಅಗಲಗೊಂಡಿವೆ. ಆದರೆ
ಸಂಚಾರ ದಟ್ಟಣೆ ಇನ್ನೂ ಹೆಚ್ಚಾಗುತ್ತಿದೆ. ಜನಸಂಖ್ಯೆಯೂ ವೃದ್ಧಿಯಾಗುತ್ತಿದೆ.

Advertisement

ಪರಿಣಾಮ ವಾಯುಮಾಲಿನ್ಯ ಹೆಚ್ಚಾಗುತ್ತಿದೆಯಲ್ಲದೆ ಬಿಸಿಲಿನ ತಾಪ ವಿಪರೀತವಾಗಿ ಮಲೆನಾಡಿನ ಹೆಬ್ಟಾಗಿಲಾದ ಶಿವಮೊಗ್ಗ ನಗರ  ರುಭೂಮಿಯಂತಾಗುತ್ತಿದೆ. ಈ ನಡುವೆ ಇರುವ ಒಂದಿಷ್ಟು ಹಸಿರನ್ನು ಯಾರ ಅರಿವಿಗೂ ಬಾರದೆ ನಾಶ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.

ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಾಗಿಗುಡ್ಡದ ಹಸಿರೀಕರಣದಲ್ಲಿ ಮೊದಲ ಬಾರಿಗೆ ಅಂದರೆ 2016-17 ರಲ್ಲಿ 110 ಗಿಡಗಳನ್ನು ನೆಡುವುದರೊಂದಿಗೆ ಪ್ರಾರಂಭವಾಗಿ ನಂತರ ನಗರದ ಹತ್ತಾರು ಶಾಲೆಗಳ ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ ಸಹಕಾರದೊಂದಿಗೆ 2017-18 ರಲ್ಲಿ 480 ಗಿಡಗಳು, 2018-19 ರಲ್ಲಿ 5600 ಗಿಡಗಳು ಹಾಗೂ 2019-20 ರ ಪ್ರಸ್ತುತ ವರ್ಷದಲ್ಲಿ ಈಗಾಗಲೇ 2300 ಗಿಡಗಳನ್ನು ನೆಟ್ಟು ಇನ್ನೂ 1000 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಯೋಜನೆ ಜಾರಿಯಲ್ಲಿದೆ. ಮತ್ತು ರಾಗಿಗುಡ್ಡದ ನಿರ್ದಿಷ್ಟ ಪ್ರದೇಶದಲ್ಲಿ ವಿವಿಧ ಔಷಧೀಯ ಗುಣಗಳುಳ್ಳ ಸಸ್ಯ ಪ್ರಬೇಧಗಳನ್ನು ಬೆಳೆಸುವ ಮೂಲಕ ಅತ್ಯುತ್ತಮ ಔಷಧ ವನವನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ನಗರದೊಳಗೆ ಹಸಿರುಕ್ಕಿಸುವ ಗುಡ್ಡ ಪ್ರದೇಶ ಇರುವ ಸಾಧ್ಯತೆ ಎಲ್ಲ ನಗರಗಳಿಗೆ ದೊರಕುವುದಿಲ್ಲ. ಅದೃಷ್ಟವಶಾತ್‌ ಅಂತಹ ಭಾಗ್ಯ ನಮ್ಮ ಶಿವಮೊಗ್ಗಕ್ಕೆ ದೊರೆತಿದೆ. ಈ ಹಸಿರುವನ ನಗರದ ಸೌಂದರ್ಯಕ್ಕೆ ಕಿರೀಟಪ್ರಾಯವಾಗುವುದಲ್ಲದೆ, ಸಕಲ ಜನತೆಗೂ ವಿಹಾರದ ತಾಣವಾಗುತ್ತದೆ ಎಂದರು. ಆದ್ದರಿಂದ ರಾಗಿಗುಡ್ಡವನ್ನು ಪೂರ್ಣ ಪ್ರಮಾಣದ ಜೈವಿಕ ವೈವಿಧ್ಯತಾ ತಾಣವಾಗಿ ಉಳಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಕೆ.ಎಸ್‌. ಈಶ್ವರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಜಾಗವನ್ನು ಜೈವಿಕ ಪ್ರದೇಶವನ್ನಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ.

ಸುಂದರ ಪರಿಸರವನ್ನು ಕಾಪಾಡಬೇಕಿದೆ. ಜಾಗ ಪರಭಾರೆಯಾಗಿದ್ದರೆ ಅದನ್ನು ರದ್ದುಪಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಸಚಿವರ
ಭೇಟಿ ಸಂದರ್ಭದಲ್ಲಿ ಪ್ರಮುಖರಾದ ನವ್ಯಶ್ರೀ ನಾಗೇಶ್‌, ಶ್ರೀಧರ್‌, ಬಿ.ಎಂ. ಕುಮಾರಸ್ವಾಮಿ, ನಂದನ್‌, ಬಾಲಕೃಷ್ಣ ನಾಯ್ಡು ಮತ್ತಿತರ ಪರಿಸರ ಆಸಕ್ತರು ಹಾಗೂ ಹೋರಾಟಗಾರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next