ಇದು ಪ್ರೀತಿಯ ಹಿಂದೆ ಬಿದ್ದು ಕಣ್ಣು ಕಳಕೊಂಡ ಪ್ರೇಮಿಯೊಬ್ಬನ ಕಥೆ ಮತ್ತು ವ್ಯಥೆ …- ಇಷ್ಟು ಹೇಳಿದ ಮೇಲೆ ಇದೊಂದು ನೈಜ ಘಟನೆಯ ಚಿತ್ರಣ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ. ಕೆಲವು ವರ್ಷಗಳ ಹಿಂದೆ ಮಂಡ್ಯದಲ್ಲಿ ಪ್ರೀತಿ ಮಾಡಿದ ಹುಡುಗನೊಬ್ಬನ ಕಣ್ಣು ಕಿತ್ತ ಸುದ್ದಿ ಎಲ್ಲೆಡೆ ಜೋರು ಸುದ್ದಿಯಾಗಿತ್ತು. ಆ ಘಟನೆ ಹಿನ್ನೆಲೆ ಇಟ್ಟುಕೊಂಡು “ರಘುವೀರ’ ಚಿತ್ರ ಶುರುವಾಗಿತ್ತು. ಈಗ ಆ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಜಿಮ್ ತರಬೇತುದಾರ ರಘು ಹುಡುಗಿಯೊಬ್ಬನ್ನು ಪ್ರೀತಿಸಿದ್ದರು. ಆ ಹುಡುಗಿ ಮನೆಯವರು ಕೋಪಗೊಂಡು, ರಘುನನ್ನು ಥಳಿಸಿ, ಮನುಷ್ಯತ್ವ ನೋಡದೆ ಕಣ್ಣು ಕಿತ್ತಿದ್ದರು. ಅದೇ ವಿಷಯ ಚಿತ್ರದ ಹೈಲೈಟ್. ನಿರ್ದೇಶಕ ಸೂರ್ಯ ಸತೀಶ್ ನೈಜತೆಯನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದು, ಇಲ್ಲೊಂದು ಸಂದೇಶವನ್ನೂ ಹೇಳಿದ್ದಾರಂತೆ.
ಪ್ರೀತಿಗೆ ಕಣ್ಣು ಕಳೆದುಕೊಂಡ ಜಿಮ್ ರಘು ಅವರು ತಮ್ಮ ಬದುಕಲ್ಲಿ ಕತ್ತಲು ಆವರಿಸಿದ್ದರಿಂದ, ಕನ್ನಡಿಗರು ಸಹಾಯ ಮಾಡಿದ್ದಾರೆ. ರಘು ಹಲವು ಆಸ್ಪತ್ರೆಗಳಿಗೆ ಹೋಗಿ ಪರೀಕ್ಷಿಸಿಕೊಂಡಾಗ, ಕಣ್ಣಿನ ದೃಷ್ಟಿ ಬರೋದು ಅಸಾಧ್ಯ ಅಂತ ಗೊತ್ತಾಗಿದೆ. ಲಂಡನ್‌ನಲ್ಲಿ ವಿಶೇಷ ಚಿಕಿತ್ಸೆ ಮೂಲಕ ದೃಷ್ಟಿ ಬರುವ ಸಾಧ್ಯತೆ ಬಗ್ಗೆ ತಿಳಿದಿದೆ. ಆದರೆ, ವೆಚ್ಚ ಹೆಚ್ಚಾಗುವುದರಿಂದ ನಿರ್ಮಾಪಕರೇ ಚಿಕಿತ್ಸೆ ಕೊಡಿಸುವ ಭರವಸೆ ಕೊಟ್ಟಿದ್ದಾರಂತೆ.
ಚಿತ್ರದಲ್ಲಿ ಹರ್ಷ ಅವರು ರಘು ಪಾತ್ರ ನಿರ್ವಹಿಸಿದ್ದಾರಂತೆ. ಆದಷ್ಟು ಬೇಗ ರಘು ಅವರು ನಮ್ಮೆಲ್ಲರನ್ನೂ ನೋಡುವಂತಾಗಲಿ ಎಂಬುದು ಹರ್ಷ ಮಾತು. ನಾಯಕಿ ಕಮ್ ನಿರ್ಮಾಪಕಿ ಧೇನು ಅಚ್ಚಪ್ಪ, ರಘು ಅವರನ್ನು ಬಾಲ್ಯದಿಂದಲೂ ನೋಡಿದ್ದರಿಂದ ಅವರ ಕಥೆ ಚಿತ್ರವಾಗಲು ಕಾರಣವಾಗಿದೆ. ಚಿತ್ರ ಬಿಡುಗಡೆ ಬಳಿಕ ರಘು ಅವರ ದೃಷ್ಟಿ ಬರುವುದಕ್ಕೆ ಎಲ್ಲಾ ಸಹಕಾರ ನೀಡುವ ಭರವಸೆ ಕೊಟ್ಟರು ಅವರು. ಬಹಳ ವರ್ಷಗಳ ಬಳಿಕ ಖಳನಟ ಸ್ವಾಮಿನಾಥನ್ “ರಘುವೀರ’ ಮೂಲಕ ಕನ್ನಡಕ್ಕೆ ಬಂದಿದ್ದಾರೆ.