Advertisement

ರಘುಪತಿ ರಾಘವ ರಾಜಾ ರಾಮ್‌!

11:09 AM Jul 29, 2018 | |

“ರಘುಪತಿ ರಾಘವ ರಾಜಾ ರಾಮ್‌ ಪತೀತ ಪಾವನ ಸೀತಾರಾಮ್‌…’ ಪ್ರಸಿದ್ಧ ಈ ಹಿಂದಿ ಭಜನೆ ಗೀತೆ ಕೇಳಿದರೆ, ಮಹಾತ್ಮಗಾಂಧಿ ನೆನಪಾಗುತ್ತಾರೆ. ಈ ಗೀತೆ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತು. ಆದರೆ, ಈ ಹಾಡಿನ ಸಾಲು ಇದೀಗ ಸಿನಿಮಾ ಆಗುತ್ತಿದೆ ಅನ್ನೋದು ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ.

Advertisement

ಹೌದು, “ರಘುಪತಿ ರಾಘವ ರಾಜಾ ರಾಮ್‌’ ಹೆಸರಿನ ಚಿತ್ರವೊಂದು ಸದ್ದಿಲ್ಲದೆಯೇ ಶುರುವಾಗಿ, ಈಗಾಗಲೇ ಹದಿನೈದು ದಿನಗಳ ಚಿತ್ರೀಕರಣವನ್ನೂ ಮುಗಿಸಿದೆ. ಈ ಚಿತ್ರಕ್ಕೆ ಮಂಜು ಸ್ವರಾಜ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶಕರದ್ದೇ. ಎಸ್‌.ವಿ.ಬಾಬು ಅವರು ನಿರ್ಮಾಪಕರು. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ, ಮಹಾತ್ಮಗಾಂಧಿ ಹಿನ್ನೆಲೆ ಚಿತ್ರಣ ಇರಬಹುದಾ?

ಎಂಬ ಪ್ರಶ್ನೆ ಎದುರಾಗಬಹುದು. ಆದರೆ, ಮಹಾತ್ಮಗಾಂಧಿ ಅವರ ಯಾವುದೇ ಹಿನ್ನೆಲೆ ಈ ಚಿತ್ರದಲ್ಲಿಲ್ಲ. ಯಾಕೆಂದರೆ, ಇಲ್ಲಿ “ರಘುಪತಿ ರಾಘವ ರಾಜಾ ರಾಮ್‌’ ಅನ್ನೋದು ನಾಲ್ವರು ಹೀರೋಗಳ ಹೆಸರು. ಒಬ್ಬೊಬ್ಬ ಹೀರೋಗೂ ಒಂದೊಂದು ಹೆಸರುಂಟು. ಆ ಹೆಸರನ್ನು ಸೇರಿಸಿ, ಚಿತ್ರದ ಶೀರ್ಷಿಕೆಯನ್ನಾಗಿಸಿದ್ದಾರೆ ನಿರ್ದೇಶಕರು.

ಇನ್ನು, ಹೀರೋಗಳ ಹೆಸರೇ ಶೀರ್ಷಿಕೆಯಾಗಿದೆ ಅಂದಮೇಲೆ, ಆ ನಾಲ್ವರು ಹೀರೋಗಳು ಯಾರು? ಈ ಪ್ರಶ್ನೆಗೆ ಉತ್ತರ, ರವಿಶಂಕರ್‌ ಗೌಡ, ಸಾಧುಕೋಕಿಲ, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್‌. ಈ ನಟರ ಹೆಸರು ಓದಿದ ಮೇಲೆ, ಇದೊಂದು ಪಕ್ಕಾ ಹಾಸ್ಯಮಯ ಚಿತ್ರ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ. ಚಿತ್ರದ ಶೀರ್ಷಿಕೆ ಮತ್ತು ಈ ನಟರನ್ನು ನೋಡಿದಾಗ, ಹಾಸ್ಯ ಚಿತ್ರವಲ್ಲದೆ ಮತ್ತೇನು?

ಇದೊಂದು ಹಾರರ್‌ ಕಾಮಿಡಿ ಚಿತ್ರ. ಭಯ ಬೀಳಿಸುತ್ತಲೇ ನಗಿಸುವ ಕಥೆ ಚಿತ್ರದಲ್ಲಿದೆ. ಕನ್ನಡಕ್ಕೆ ಹೊಸರೀತಿಯ ಕಥೆ ಮಾಡಿ, ಅದನ್ನು ಹೆದರಿಸುವುದರ ಜೊತೆಗೆ ಜೋರು ನಗೆ ತರಿಸುವ ಜವಾಬ್ದಾರಿ ಹೊತ್ತಿರುವ ನಿರ್ದೇಶಕ ಮಂಜು ಸ್ವರಾಜ್‌, ಈಗಾಗಲೇ ಮೋಹನ್‌ ಬಿ.ಕೆರೆ ಸ್ಟುಡಿಯೋದಲ್ಲಿ ಕಳೆದ ಹದಿನೈದು ದಿನಗಳಿಂದಲೂ ಬಿರುಸಿನ ಚಿತ್ರೀಕರಣ ನಡೆಸುತ್ತಿದ್ದಾರೆ.

Advertisement

ಅಲ್ಲೊಂದು ದೊಡ್ಡ ಸೆಟ್‌ ಹಾಕಲಾಗಿದ್ದು, ಆ ಸೆಟ್‌ನಲ್ಲಿ ರವಿಶಂಕರ್‌ ಗೌಡ, ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್‌ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿರುವ “ರಘುಪತಿ ರಾಘವ ರಾಜಾ ರಾಮ್‌’ ಚಿತ್ರದಲ್ಲಿ ರವಿಶಂಕರ್‌ ಗೌಡ ಅವರು ಎ.ಟಿ.ಎಂ ವಾಚ್‌ಮೆನ್‌ ಆಗಿ ಕಾಣಸಿಕೊಂಡರೆ, ಸಾಧು ಕೋಕಿಲ ಅವರಿಲ್ಲಿ ಮಹಾನ್‌ ಕುಡುಕ ಪೂಜಾರಿ ಪಾತ್ರ ಮಾಡುತ್ತಿದ್ದಾರೆ.

ಕುರಿಪ್ರತಾಪ್‌ ಅವರು ಹೇರ್‌ಕಟಿಂಗ್‌ ಶಾಪ್‌ ನಡೆಸಿದರೆ, ಚಿಕ್ಕಣ್ಣ ಬಾರ್‌ ಸರ್ವರ್‌ ಆಗಿ ನಟಿಸುತ್ತಿದ್ದಾರೆ. ರವಿಶಂಕರ್‌ ಗೌಡ ಅವರಿಗೆ ಇಲ್ಲಿ ಕಿವಿ ಕೇಳಿಸಲ್ಲ, ಸಂಜೆ 6 ರ ನಂತರ ಕಣ್ಣೂ ಕಾಣಿಸಲ್ಲ. ಇತರೆ ಪಾತ್ರಗಳದ್ದೂ ಒಂದೊಂದು ಕಥೆ. ಹಾಗಾಗಿ ಇದೊಂದು ಮಜ ಎನಿಸುವ ಚಿತ್ರವಂತೂ ಹೌದು. 

ಎಲ್ಲಾ ಸರಿ, ಈ ಚಿತ್ರದಲ್ಲಿ ನಾಯಕಿ ಇಲ್ಲವೇ? ಅದಕ್ಕೆ ಉತ್ತರ ಶ್ರುತಿಹರಿಹರನ್‌. ಅವರಿಲ್ಲಿ ನಾಯಕಿ. ಆ ನಾಲ್ವರು ನಟರಿಗೂ ಇವರೊಬ್ಬರೇ ನಾಯಕಿನಾ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಚಿತ್ರದಲ್ಲಿ ಶಿವರಾಮಣ್ಣ, ಸುಮಿತ್ರಮ್ಮ, ನಟರಂಗ ರಾಜೇಶ್‌ ಇತರರು ಇದ್ದಾರೆ. ಅಭಿಮನ್‌ ರಾಯ್‌ ಸಂಗೀತವಿದೆ. ಸುರೇಶ್‌ ಬಾಬು ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next