ಉಡುಪಿ: ಸರಕಾರದ ನೀತಿ ನಿಯಮಾವಳಿಗೆ ತಕ್ಕಂತೆ ಉದ್ಯಮಿ ಬಿ.ಆರ್. ಶೆಟ್ಟಿ ಸಮೂಹವು ನಡೆದುಕೊಳ್ಳದ್ದರಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಒಪ್ಪಂದ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎ. 4ರಂದುರಾಜ್ಯದ ಮುಖ್ಯ ಕಾರ್ಯದರ್ಶಿ ಯವರಿಗೆ ಬಿ.ಆರ್.ಶೆಟ್ಟಿ ಪತ್ರ ಬರೆದಿ
ದ್ದರು. ಅದರಲ್ಲಿ ಎಪ್ರಿಲ್ ಅಂತ್ಯದವರೆಗೆ ಮಾತ್ರ ಮುಂದುವರಿಸುವುದಾಗಿ ಉಲ್ಲೇಖೀಸಿದ್ದರು. ಆದರೆ ಬಿ.ಆರ್. ಶೆಟ್ಟಿ ಸಮೂಹವು ಸರಕಾರದ ಬೇಡಿಕೆಗಳಿಗೆ ಒಪ್ಪದ ಕಾರಣ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದರು.
ಈಗಿನ 200 ಉಚಿತ ಹಾಸಿಗೆಗಳ ಆಸ್ಪತ್ರೆಯಿಂದ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ದಾಖಲಾದರೆ, ಅಲ್ಲಿಯೂ ಉಚಿತ ಚಿಕಿತ್ಸೆ ನೀಡ ಬೇಕೆಂದು ಸರಕಾರ ಸೂಚಿಸಿತ್ತು. 70 ಬೆಡ್‌ಗಳ ಆಸ್ಪತ್ರೆಯ ವೈದ್ಯರು ಮತ್ತು ಸಿಬಂದಿಯನ್ನು ಪ್ರತ್ಯೇಕ ಘಟಕ ಮಾಡಿ, 200 ಬೆಡ್‌ಗಳ ಉಚಿತ ಆಸ್ಪತ್ರೆಯಲ್ಲಿ ಇರಿಸುವುದು. ಸಿಬಂದಿಯ ವೇತನವನ್ನು ಸರಕಾರವೇ ಭರಿಸಲು ತೀರ್ಮಾನಿಸಲಾಗಿತ್ತಲ್ಲದೆ, ಸರಕಾರದ ಕಡೆಯಿಂದ ಒಬ್ಬ ಸೀನಿಯರ್ ಸುಪರಿಂಟೆಂಡೆಂಟ್ ನೇಮಿಸುವ ಉದ್ದೇಶವಿತ್ತು ಎಂದು ತಿಳಿಸಿದರು.
ಆಗಿನ ಆರೋಗ್ಯ ಸಚಿವ ರಮೇಶ್ ಕುಮಾರ್ ಬಿ.ಆರ್. ಶೆಟ್ಟಿ ಪರ ವಕಾಲತ್ತು ವಹಿಸಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಸರಕಾರಿ ಆಸ್ಪತ್ರೆಗಳ ಜಿಲ್ಲಾ ಸಮಿತಿಗಳಲ್ಲಿ ಜನಪ್ರತಿನಿಧಿಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಈ ಆಸ್ಪತ್ರೆ ಕಮಿಟಿಯಲ್ಲಿ ಜನಪ್ರತಿನಿಧಿಗಳನ್ನು ಹೊರಗೆ ಇಟ್ಟು,5 ಮಂದಿ ಅಧಿಕಾರಿಗಳನ್ನು ಮಾತ್ರ ಸೇರಿಸಲಾಗಿತ್ತು. ಅಂತಿಮವಾಗಿ ಸಚಿವರು ಶಾಶ್ವತ ಒಪ್ಪಂದ ಸಂದರ್ಭ ಜನಪ್ರತಿನಿಧಿಗಳಿಗೆ ಅವಕಾಶ ನೀಡುವುದಾಗಿ ಹೇಳಿದ್ದರು ಎಂದು ವಿವರಿಸಿದರು.
ನಿಯಮದಂತೆ ನಡೆದುಕೊಂಡರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿರೋಧವಿಲ್ಲ. ಆದರೆ ಬಿ. ಆರ್. ಶೆಟ್ಟಿಯವರ ಒತ್ತಡಕ್ಕೆ ಮಣಿದು ಸರಕಾರ ಒಪ್ಪಿಗೆ ನೀಡಿದರೆ ನಾನು ವಿರೋಧಿಸುವೆ ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪರವಾನಿಗೆ ಸಂಬಂಧ ತಳ ಅಂತಸ್ತಿನಲ್ಲಿ ಮೂರು ಫ್ಲೋರ್‌ಗೆ ಅನುಮತಿ ಕೇಳಿದ್ದು ನಗರಸಭೆ ನಿರಾಕರಿಸಿದೆ. ಎರಡು ಫ್ಲೋರ್‌ಗೆ ಬೇಕಿದ್ದರೆ ಇಂದೇ ಅನುಮತಿ ಕೊಡಿಸುವುದಾಗಿ ತಿಳಿಸಿದರು.
ಹಿಂದಿನಂತೆ ಪುನರ್ ನಿರ್ಮಿಸಲಿ
ಹಾಜಿ ಅಬ್ದುಲ್ಲ ಸಾಹೇಬರು ಕಟ್ಟಿದಂತಹ ಆಸ್ಪತ್ರೆ ಕಟ್ಟಡ ಸುಸಜ್ಜಿತ ವಾಗಿತ್ತು. ಅದನ್ನು ಒಪ್ಪಂದ ಆಗುವ ಮೊದಲು ಕೆಡವಿದ್ದು ಯಾಕೆ ಅನ್ನುವ ಪ್ರಶ್ನೆಗೆ ಬಿ.ಆರ್. ಶೆಟ್ಟಿ ಉತ್ತರಿಸಲಿ ಎಂದು ಆಗ್ರಹಿಸಿದ ಅವರು, ಹಿಂದಿನ ಶೈಲಿಯಲ್ಲೇ ಆಸ್ಪತ್ರೆಯನ್ನು ಕಟ್ಟಿಕೊಟ್ಟರೆ ವಾಪಸ್ ತೆಗೆದುಕೊಳ್ಳುವು ದಾಗಿ ತಿಳಿಸಿದರು.