ಮಲ್ಪೆ: ಕೊಳ-ಪಡುಕರೆ ಪ್ರದೇಶದಲ್ಲಿ ಇದುವರೆಗೆ ಸರಕಾರಿ ಜಾಗದಲ್ಲಿ ಇದ್ದ 143 ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ಅವರು ಸ್ವಂತ ಜಾಗದಲ್ಲಿ ನೆಲೆಸಿ ನೆಮ್ಮದಿಯ ಬದುಕು ಸಾಗಿಸುವಂತಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಅವರು ಮಂಗಳವಾರ ಮಲ್ಪೆ ಕೊಳ ಹಾಗೂ ಪಡುಕರೆ ಭಾಗದ 143 ಮೀನುಗಾರ ಕುಟುಂಬಗಳ ಮನೆಗಳಿಗೆ ತೆರಳಿ ಹಕ್ಕುಪತ್ರ ನೀಡಿ ಮಾತನಾಡಿದರು.
ಆರ್‌ಟಿಸಿಯಲ್ಲಿ ಸಮುದ್ರ ಎಂದಿದ್ದ ಜಾಗವನ್ನು 2008ರಲ್ಲಿ ಶಾಸಕನಾಗಿದ್ದಾಗ ಕೊಳ ಮತ್ತು ಪಡುಕರೆಯ 57 ಎಕ್ರೆ ಜಾಗಕ್ಕೆ ಸವೇ ನಂಬರ್ ಸೇರ್ಪಡೆ ಮಾಡಿ, ಕಂದಾಯ ಪ್ರಿನ್ಸಿಪಲ್ ಸೆಕ್ರೆಟರಿ ಜಾಮದಾರ್, ಕಂದಾಯ ಸಚಿವ ಜಗದೀಶ್ ಶೆಟ್ಟರ್ ಅವರ ಸಹಕಾರದಲ್ಲಿ ಅಧಿಸೂಚನೆ ಹೊರಡಿಸಿ 358 ಕುಟುಂಬಗಳಿಗೆ ಪ್ರಾರಂಭಿಕ ಹಂತದಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಸಿಆರ್‌ಝಡ್ ನಿಯಮದ ಕೆಲವು ಸಮಸ್ಯೆಯಿಂದಾಗಿ 143 ಕುಟುಂಬ ಗಳಿಗೆ ಹಕ್ಕುಪತ್ರ ನೀಡುವಲ್ಲಿ ತೊಡಕಾಗಿತ್ತು. ಈ ಸಲ ಮತ್ತೂಮ್ಮೆ ಶಾಸಕನಾದ ಮೇಲೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಕೆಸಿಝಡ್‌ಎಂನಲ್ಲಿ ವಿಶೇಷ ಪ್ರಕರಣದಡಿ ಉಳಿದ ಕುಟುಂಬಕ್ಕೂ ನೀಡಲಾಗಿದೆ ಎಂದರು.
ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ನಗರಸಭಾ ಸದಸ್ಯರಾದ ಎಡ್ಲಿನ್ ಕರ್ಕಡ, ವಿಜಯ ಕುಂದರ್, ಸ್ಥಾಯೀ ಸಮಿತಿಯ ಅಧ್ಯಕ್ಷ ಶ್ರೀಶ ಕೊಡವೂರು, ಮಾಜಿ ಅಧ್ಯಕ್ಷ ಗಿರೀಶ್ ಅಂಚನ್, ತಾ.ಪಂ. ಮಾಜಿ ಅಧ್ಯಕ್ಷ ಶರತ್ ಕುಮಾರ್, ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಕಾರ್ಯದರ್ಶಿ ರತ್ನಾಕರ ಸಾಲ್ಯಾನ್, ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಶಿವಪಂಚಾಕ್ಷರಿ ಭಜನ ಮಂದಿರದ ಅಧ್ಯಕ್ಷ ವಿಕ್ರಮ್ ಟಿ. ಶ್ರೀಯಾನ್, ಬಾಲಕರ ಶ್ರೀ ರಾಮ ಭಜನ ಮಂದಿರದ ಅಧ್ಯಕ್ಷ ಕರುಣಾಕರ ಸಾಲ್ಯಾನ್, ಹನುಮಾನ್ ವಿಠೊಬ ಭಜನ ಮಂದಿರದ ಅಧ್ಯಕ್ಷ ದಯಾನಂದ ಕಾಂಚನ್, ಪಾಂಡುರಂಗ ಮಲ್ಪೆ, ಮಂಜು ಕೊಳ, ಮಿಥುನ್ ಕುಂದರ್, ತಾರಾನಾಥ ಕುಂದರ್, ರವಿ ಸಾಲ್ಯಾನ್, ಲಕ್ಷ್ಮಣ ಕರ್ಕೇರ, ವಿಕ್ರಮ ಸಾಲ್ಯಾನ್, ಕಿರಣ್ ಕುಂದರ್, ದಮಯಂತಿ ಆನಂದ್ ಪಾಲ್ಗೊಂಡಿದ್ದರು.
ಭೂಪರಿವರ್ತನೆಯಾದ ಹಕ್ಕುಪತ್ರ
ದಾಖಲೆಯಲ್ಲಿ ಸಮುದ್ರ ಎಂದು ಇದ್ದ 57 ಎಕ್ರೆ ಭೂಪ್ರದೇಶಕ್ಕೆ ಸರ್ವೇ ನಂಬರ್ ನೀಡಿ ಭೂಪ್ರದೇಶವೆಂದು ಗುರುತಿಸಿ ನೀಡಲಾಗಿದೆ. ಮುಖ್ಯವಾಗಿ ಸಿಆರ್‌ಝಡ್‌ನಲ್ಲಿ ಭೂ ಪರಿವರ್ತನೆ ಮಾಡಲು ಆಗುವುದಿಲ್ಲ. ಆದರೆ ಇದನ್ನು ವಿಶೇಷ ಪ್ರಕರಣದಡಿ ಭೂಪರಿವರ್ತನೆಗೊಳಿಸಿಯೇ ಹಕ್ಕುಪತ್ರವನ್ನು ನೀಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಸಮುದ್ರವನ್ನು ನಂಬಿ ಜೀವಿಸುವವರು ನಾವು. ಇದುವರೆಗೆ ಸಮುದ್ರತೀರದಲ್ಲಿ ಸರಕಾರಿ ಜಾಗದಲ್ಲಿದ್ದು ಕೊಂಡು ಮನೆ ಮಾಡಿ ಬದುಕು ಸಾಗಿಸುತ್ತಿದ್ದೆವು. ನಮಗೆ ಬ್ಯಾಂಕುಗಳಲ್ಲಿ ಯಾವುದೇ ಸಾಲ ಸಿಗುತ್ತಿರಲಿಲ್ಲ. ಇದೀಗ ಸರಕಾರದ ಹಕ್ಕುಪತ್ರ ಸಿಕ್ಕಿದೆ. ಸ್ವಂತ ಜಾಗ ಸಿಕ್ಕಿದೆ ಎಂಬ ನೆಮ್ಮದಿ ಇದೆ. ಮಾನವೀಯ ನೆಲೆಯಲ್ಲಿ ಶಾಸಕ ರಘುಪತಿ ಭಟ್ ಮನೆಗೆ ಬಂದು ಹಕ್ಕುಪತ್ರ ಕೊಟ್ಟಿದ್ದಾರೆ.
– ಗೋಪಾಲ ಕೊಳ, ಫಲಾನುಭವಿ