Advertisement

ರಘುಮೂರ್ತಿಗೆ ಸಚಿವ ಸ್ಥಾನದ ಯೋಗ?

12:50 PM May 21, 2018 | Team Udayavani |

ಚಿತ್ರದುರ್ಗ: ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾದಾಗ್ಯೂ ಚಳ್ಳಕೆರೆ ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿರುವ ಕಾಂಗ್ರೆಸ್‌ನ ಟಿ. ರಘುಮೂರ್ತಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ
ಸಚಿವರಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Advertisement

ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸುತ್ತಿದ್ದಂತೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿದೆ. ಈ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ. ರಘುಮೂರ್ತಿ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕರಾಗಿರುವುದರಿಂದ ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯೂ ದೊರೆಯಬಹುದು ಎಂಬ ನಿರೀಕ್ಷೆ ಇದೆ. 

ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಸೇರಿದಂತೆ ಮೂವರು ಶಾಸಕರು ದಯನೀಯವಾಗಿ ಪರಾಭವಗೊಂಡಿದ್ದಾರೆ. ಆಡಳಿತ ವಿರೋಧಿ ಅಲೆಯಲ್ಲೂ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಮಾನ ಉಳಿಸಿದ ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನದ ಭಾಗ್ಯ ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ನೀಡಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಸಲಾಯಿತು.

ಶ್ರೀರಾಮುಲು ಪ್ರಭಾವ ಮತ್ತು ಉಪಮುಖ್ಯಮಂತ್ರಿ ಹುದ್ದೆ ಸಮುದಾಯಕ್ಕೆ ದೊರೆಯಲಿದೆ ಎನ್ನುವ ಕಾರಣಕ್ಕೆ ಇಡೀ ವಾಲ್ಮೀಕಿ ನಾಯಕ ಸಮುದಾಯ ಬಿಜೆಪಿಯತ್ತ ವಾಲಿತು. ಇದರಿಂದ ಮೊಳಕಾಲ್ಮೂರು ಸೇರಿದಂತೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಮಲ ಅರಳಿದೆ.

Advertisement

ಶ್ರೀರಾಮುಲು ಪ್ರಭಾವ ತಗ್ಗಿಸಲು ಯತ್ನ: ಜಿಲ್ಲೆಯಲ್ಲಿ ಬಿಜೆಪಿ ಮತ್ತು ಶ್ರೀರಾಮುಲು ಪ್ರಭಾವ ತಗ್ಗಿಸಲು ವಾಲ್ಮೀಕಿ ನಾಯಕ ಸಮುದಾಯದವರೇ ಆದ ಶಾಸಕ ಟಿ. ರಘುಮೂರ್ತಿ ಅವರನ್ನು ಸಚಿವರನ್ನಾಗಿಸಿ ಪ್ರಮುಖ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸುವ ಬಗ್ಗೆ ಕಾಂಗ್ರೆಸ್‌ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಜೆಡಿಎಸ್‌ ಖಾತೆ ತೆರೆಯದೇ ಇರುವುದರಿಂದ ರಘುಮೂರ್ತಿ ಅವರಿಗೆ ಮಂತ್ರಿ ಸ್ಥಾನ ಅನಾಯಾಸವಾಗಿ ಒಲಿದು ಬರುವ ಸಾಧ್ಯತೆ ಇದೆ.

ಮುಂದಿನ ವರ್ಷ ಅಂದರೆ 2019ರಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಈಗಿರುವ ಸಂಸದ ಸ್ಥಾನ ಉಳಿಸಿಕೊಂಡು ನೆಲ ಕಚ್ಚಿರುವ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಜಿಲ್ಲೆಗೆ ಸಚಿವ ಸ್ಥಾನ ನೀಡುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ. ಜೊತೆಗೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಶ್ರೀರಾಮುಲು ಅವರೊಬ್ಬರೇ ನಾಯಕರಲ್ಲ, ರಘುಮೂರ್ತಿ ಕೂಡ ಪ್ರಭಾವಿ ನಾಯಕ ಎಂದು ಬಿಂಬಿಸಿ ಮುಂದಿನ ಚುನಾವಣೆಗಳಲ್ಲಿ ವಾಲ್ಮೀಕಿ ನಾಯಕ ಸಮುದಾಯದವರು ಕಾಂಗ್ರೆಸ್‌ನತ್ತ ವಾಲುವಂತೆ ಮಾಡುವ ದೂರದೃಷ್ಟಿಯೊಂದಿಗೆ ರಘುಮೂರ್ತಿ ಅವರಿಗೆ ಸಚಿವಗಿರಿ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆಂಜನೇಯಗೂ ನ್ಯಾಯ ಒದಗಿಸಲು ಚಿಂತನೆ: ಇನ್ನೊಂದೆಡೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಸ್ಪೃಶ್ಯ
(ಎಡಗೈ ಮಾದಿಗ) ಸಮುದಾಯ ಬೇರೆ ಪಕ್ಷದತ್ತ ವಾಲದಂತೆ ನೋಡಿಕೊಳ್ಳಲೂ ಚಿಂತನೆ ನಡೆಸಲಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್‌. ಆಂಜನೇಯ ಈ ಬಾರಿ ಪರಾಜಯ ಅನುಭವಿಸಿದ್ದಾರೆ. ಹೀಗಾಗಿ ಆಂಜನೇಯ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿ ಸಚಿವರನ್ನಾಗಿ ಮಾಡುವ ಚಿಂತನೆಯೂ ನಡೆದಿದೆ ಎಂದು ಕಾಂಗ್ರೆಸ್‌ ಮೂಲಗಳಿಂದ ತಿಳಿದು ಬಂದಿದೆ.
 
ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ನಾಲ್ಕು ಮೀಸಲು ಕ್ಷೇತ್ರಗಳಿದ್ದು, ಎರಡು ಎಸ್ಸಿ, ಎರಡು ಎಸ್ಟಿ ಮೀಸಲು ಕ್ಷೇತ್ರಗಳಾಗಿವೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಭೋವಿ ಸಮುದಾಯದ ಎಂ. ಚಂದ್ರಪ್ಪ, ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾವಗಡ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಭೋವಿ ಸಮುದಾಯದ ವೆಂಕಟರಮಣಪ್ಪ ಆಯ್ಕೆಯಾಗಿದ್ದಾರೆ. ಹೊಸದುರ್ಗ ಸಾಮಾನ್ಯ ಕ್ಷೇತ್ರದಲ್ಲೂ ಭೋವಿ ಸಮುದಾಯದ ಗೂಳಿಹಟ್ಟಿ ಶೇಖರ್‌ ಗೆಲುವು ಸಾಧಿಸಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯ ಸದ್ಯಕ್ಕೆ ರಾಜಕೀಯ ಅಸ್ಮಿತೆ ಕಳೆದುಕೊಂಡಿದೆ. ಕಳೆದ ಬಾರಿ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಅವರು ಕೊರಟಗೆರೆಯಲ್ಲಿ ಸೋಲುಂಡಾಗ ಅವರನ್ನು ವಿಧಾನ ಪರಿಷತ್‌ ಸದಸ್ಯರಾಗಿಸಿ ಸಚಿವರನ್ನಾಗಿಸಲಾಗಿತ್ತು. ಈಗ ಅದೇ ಮಾದರಿಯಲ್ಲಿ ಆಂಜನೇಯ ಅವರಿಗೆ ಮಂತ್ರಿಗಿರಿ ನೀಡಬೇಕು ಎಂದು ಮಾದಿಗ ಸಮುದಾಯದ ಮುಖಂಡರು ಕಾಂಗ್ರೆಸ್‌ ಹೈಕಮಾಂಡ್‌ ಬಳಿ ಬೇಡಿಕೆ ಇಟ್ಟಿದ್ದಾರೆ. ಮಾದಿಗ ಸಮುದಾಯವನ್ನು ಕಾಂಗ್ರೆಸ್‌ ನಲ್ಲೇ ಉಳಿಸಿಕೊಳ್ಳಲು ಆಂಜನೇಯ ಅವರಂತಹ ನಾಯಕರ ಅಗತ್ಯವಿದ್ದು, ಒಂದೊಮ್ಮೆ ಸಚಿವ ಸ್ಥಾನ ನೀಡದಿದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾದರೂ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಜಿಲ್ಲೆಗೆ ಎರಡು ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಹುದ್ದೆ ದೊರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸಮ್ಮಿಶ್ರ ಸರ್ಕಾರದ ಸಚಿವರ ಪಟ್ಟಿ ಬಿಡುಗಡೆಯಾದ ಬಳಿಕವಷ್ಟೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.

ಸೋತಿದೆ. ಹಾಗಾಗಿ ಆ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಲು ಮಾಜಿ ಸಚಿವ ಎಚ್‌. ಆಂಜನೇಯ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿ ಸಚಿವರನ್ನಾಗಿ ಮಾಡಬೇಕು. ಅಲ್ಲದೆ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಟಿ. ರಘುಮೂರ್ತಿ ಅವರಿಗೂ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್‌ ಮುಂದೆ ಬೇಡಿಕೆ ಇಡಲಾಗಿದೆ. ಇದರ ಮಧ್ಯೆ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಕೂಡ ವಿಧಾನ ಪರಿಷತ್‌ ಸದಸ್ಯರಾಗಲು ಪ್ರಯತ್ನ ಮಾಡುತ್ತಿದ್ದಾರೆ.  
ಫಾತ್ಯರಾಜನ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು 

„ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next