ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ರಾಜಕೀಯ ಪುನರ್ಜನ್ಮ ಪಡೆದ ವಿಷಯ ನಿಮಗೆ ಗೊತ್ತಿರಬಹುದು. ಈಗ ಇದೇ ವಿಷಯವನ್ನು ಇಟ್ಟುಕೊಂಡು ಸಿನಿಮಾ ರೂಪದಲ್ಲಿ ತೆರೆಗೆ ತರುವ ಯೋಚನೆಯಲ್ಲಿದ್ದಾರೆ ನಿರ್ದೇಶಕ ರಘು ಕೋವಿ. ಸದ್ಯಕ್ಕೆ ಈ ಸಿನಿಮಾದ ಕುರಿತು ಒಂದಷ್ಟು ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.
ಎಲ್ಲಾ ಓಕೆ, ಇಂದಿರಾ ಗಾಂಧಿ ಪಾತ್ರ ಹೇಗೆ ಚಿತ್ರದೊಳಗಡೆ ಸೇರಿಕೊಳ್ಳುತ್ತದೆ ಎಂಬ ಕುತೂಹಲ ಸಹಜ. ಆದರೆ, ಈ ಬಗ್ಗೆ ಗುಟ್ಟುಬಿಟ್ಟು ಕೊಡಲು ರಘು ಕೋವಿ ಸಿದ್ಧರಿಲ್ಲ. ಇನ್ನು, ಇಂದಿರಾ ಗಾಂಧಿ ಪಾತ್ರವನ್ನು ಯಾರು ಮಾಡುತ್ತಾರೆ ಎಂದರೆ ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಆದರೆ, ಬಾಲಿವುಡ್ ನಟಿ ರವೀನಾ ಟಂಡನ್ ಅವರನ್ನು ಈ ಪಾತ್ರಕ್ಕಾಗಿ ಕರೆತರುವ ಯೋಚನೆಯಂತೂ ಚಿತ್ರತಂಡಕ್ಕಿದೆ. ಈಗಾಲೇ ರವೀನಾ ಟಂಡನ್ ಕೆಜಿಎಫ್ 2 ಚಿತ್ರದಲ್ಲಿ ನಟಿಸಿದ್ದಾರೆ.
ಇದರ ನಡುವೆ ನಿರ್ದೇಶಕ ರಘು ಕೋವಿ, ಸದ್ದಿಲ್ಲದೆ ಮತ್ತೂಂದು ಚಿತ್ರದ ತಯಾರಿಗೂ ಕೈ ಹಾಕಿದ್ದಾರೆ. ಈ ಚಿತ್ರದ ಮೂಲಕ ಕೀರ್ತಿ ಕುಮಾರ್ ಎನ್ನುವ ಹೊಸ ಹುಡುಗನನ್ನು ಹಿರಿತೆರೆಗೆ ಪರಿಚಯಿಸುವ ಯೋಚನೆಯಲ್ಲಿ ದ್ದಾರೆ. ಈ ಬಗ್ಗೆ ಮಾತನಾಡುವ ರಘು ಕೋವಿ, ಈ ವರ್ಷ ಮೂರು ಸಿನಿಮಾಗಳನ್ನು ಒಟ್ಟಿಗೆ ಮಾಡುವ ಯೋಚನೆಯಿತ್ತು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಆ ಸಿನಿಮಾಗಳು ಸೆಟ್ಟೇರುವುದು ತಡವಾಗುತ್ತಿದೆ.
ಇದರ ನಡುವೆಯೇ ಈ ಸಿನಿಮಾಗಳ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆ ಸಿನಿಮಾಗಳ ಪೈಕಿ ಒಂದರಲ್ಲಿ ಕೀರ್ತಿ ಕುಮಾರ್ ಎಂಬ ಹೊಸ ಹುಡುಗನನ್ನು ಹೀರೋ ಆಗಿ ಪರಿಚಯಿಸುವ ಪ್ಲಾನ್ ಇದೆ. ಲಂಡನ್ ನಲ್ಲಿ ಎಂಬಿಎ ಪದವಿ ಪಡೆದುಕೊಂಡು ಬಂದಿರುವ ಕೀರ್ತಿಕುಮಾರ್ ಸದ್ಯ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿ ದ್ದಾರೆ. ಜೊತೆಗೆ ತಮ್ಮ ಹೊಸ ಸಿನಿಮಾಕ್ಕೆ ಬೇಕಾದ ಒಂದಷ್ಟು ತಯಾರಿ ಕೂಡ ಈಗಾಗಲೇ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.