Advertisement

ದನ ಕಾಯಲು ಹೋಗು ಬೈಗುಳದ ಹಿಂದೆ ಮಾರ್ಗದರ್ಶನ: ರಾಘವೇಶ್ವರ ಸ್ವಾಮೀಜಿ

05:41 PM May 04, 2022 | Suhan S |

ಸಾಗರ:  ಹಿಂದೆ ನಮ್ಮ ಹಿರಿಯರು, ಚಿಕ್ಕವರು ತಪ್ಪು ಮಾಡಿದಾಗ ವಿದ್ಯೆ ಹತ್ತದಿದ್ದಾಗ ಬೈಗುಳ ರೂಪವಾಗಿ ದನ ಕಾಯುವುದಕ್ಕೆ ಹೋಗು ಎನ್ನುತ್ತಿದ್ದರು. ಅದು ವಾಸ್ತವವಾಗಿ ಬೈಗುಳವಾಗಿರಲಿಲ್ಲ. ವ್ಯಕ್ತಿಯ ಉತ್ಥಾನಕ್ಕೋಸ್ಕರ ನೀಡುವ ನಿಜವಾದ ಮಾರ್ಗದರ್ಶನವಾಗಿತ್ತು. ಗೋವಿನ ಸೇವೆ ಎನ್ನುವುದು ಜ್ಞಾನದ ಮಾರ್ಗ ಎಂದು ಹೊಸನಗರದ ರಾಮಚಂಧ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ಹೇಳಿದರು.

Advertisement

ತಾಲೂಕಿನ ಭೀಮನಕೋಣೆ ಲಕ್ಷ್ಮೀನಾರಾಯಣ ದೇವಸ್ಥಾನದ ಜೀರ್ಣಾಷ್ಟಬಂಧಪೂರ್ವಕ ಪುನಃ ಪ್ರತಿಷ್ಠಾಪನೆ, ನವಭವನ ಲೋಕಾರ್ಪಣೆ ನೆರವೇರಿಸಿ  ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಬುಧವಾರ ಆಶೀರ್ವಚನ ನೀಡಿದರು.

ಹಿಂದೆ ಪುರಾಣ ಕಥೆಗಳಲ್ಲಿ ಈ ವಿಷಯಕ್ಕೆ ಸಾದೃಷ್ಟ ಇರುವುದನ್ನು ಸತ್ಯಕಾಮ ಜಾಬಾಲಿ ಕಥೆಯಲ್ಲಿ ಗಮನಿಸಬಹುದು. ಗೋವನ್ನು ಕಾಯುವ ಕಾರ್ಯದಿಂದ ಬ್ರಹ್ಮಜ್ಞಾನಿಯಾದ ಕಥೆ ಅದು ಅಂತಹ ವಾಸ್ತವಗಳು ಆಧುನಿಕ ಕಾಲಘಟ್ಟಕ್ಕೂ ಬದಲಾಗುವುದಿಲ್ಲ ಎನ್ನುವುದಕ್ಕೆ ಭೀಮನಕೋಣೆಯಂತಹ ಊರು ಸಾಕ್ಷಿ. ಈ ಹಿಂದೆ ಭೀಮನಕೋಣೆಯಲ್ಲಿ ಹೆಚ್ಚು ಗೋಸಂಪತ್ತು ಇತ್ತು. ಇಲ್ಲಿನ ಜನರು ವಾಸ್ತವವಾಗಿ ಬುದ್ಧಿವಂತರಾಗಿದ್ದರು ಎನ್ನುವ ಮಾತುಗಳು ಇದಕ್ಕೆ ಉದಾಹರಣೆಯಾಗಿ ನಿಲ್ಲಲಿದೆ ಎಂದರು.

ಜಗತ್ತಿನ ಆದಿ ದಂಪತಿಗಳಾದ ಲಕ್ಷ್ಮಿನಾರಾಯಣರು ದಾಂಪತ್ಯ ಜೀವನದ ಆದರ್ಶ ಸ್ವರೂಪರು. ನಾರಾಯಣ ಸುರಕ್ಷೆಯ ಪ್ರತೀಕವಾದರೆ ಲಕ್ಷ್ಮಿ ಸಂಪತ್ತಿನ ಪ್ರತೀಕ. ಜೀವನದ ಸುರಕ್ಷೆಯೇ ಸಂಪತ್ತು. ಹಾಗಾಗಿ ಲಕ್ಷ್ಮೀನಾರಾಯಣ ದೇವಾಲಯದ ಅಷ್ಟಬಂಧದಂತಹ ಶುಭಕಾರ್ಯಗಳು ಜನರ ಶ್ರೇಯಸ್ಸಿನ ಭಾಗ್ಯ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಗೋವಿನ ರಕ್ಷಣೆಯ ಜೊತೆಗೆ ಅದರ ಮಹತ್ವವನ್ನು ನಿತ್ಯ ನಿರಂತರ ಜಗತ್ತಿನ ಮುಂದೆ ಸಾರಿದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪ್ರಯತ್ನದ ಫಲವಾಗಿ ಇಂದು ಗೋರಕ್ಷಣೆಯಂತಹ ಮಹತ್ಕಾರ್ಯ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಭಾರತ ನೆಲದ ಉಳಿವು ಸಂತರ ಶಕ್ತಿಯ ಮೇಲಿದೆ. ಸ್ವಾಮಿ ವಿವೇಕಾನಂದರು ಅಂದೇ ಹೇಳಿದಂತೆ ಮಠ ಮತ್ತು ಸಂತ ಪರಂಪರೆ ಇರುವ ಭಾರತಕ್ಕೆ ಎಂದೂ ಸಾವಿಲ್ಲ ಎನ್ನುವುದು ಶಾಶ್ವತ ಸತ್ಯವಾಗಿದೆ ಎಂದು ಹೇಳಿದರು.

Advertisement

ಎಂಎಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ಸಂಸ್ಕಾರಯುತ ಯುವಕರು ದೇಶದ ಆಸ್ತಿ. ಅಂತಹ ಪ್ರಜೆಗಳನ್ನು ತಯಾರು ಮಾಡುವ ವಿಷ್ಣುಗುಪ್ತ ವಿವಿ ಸ್ಥಾಪನೆ ಮಾಡಿ ಶ್ರೀಗಳು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ಸಿಗಂದೂರು ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಮಾತನಾಡಿದರು. ಇದಕ್ಕೂ ಮುನ್ನ ನವಭವನ ಲೋಕಾರ್ಪಣೆ, ಜೀರ್ಣಾಷ್ಟಬಂಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳ ಸಾನಿಧ್ಯದಲ್ಲಿ ನೆರವೇರಿತು.  ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ದೇವಸ್ಥಾನ ಸಮಿತಿಯ ಆರ್. ಗುರುಪ್ರಸಾದ್ ಐಸಿರಿ, ಬಿ.ಎನ್. ಶ್ರೀಧರ್, ಸುಬ್ರಹ್ಮಣ್ಯ, ರಾಧಾಕೃಷ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next