ವಿಟ್ಲ: ಗೋವಿನ ಮೇಲೆ ಕಸಾಯಿಖಾನೆಯಲ್ಲಿ ಕ್ರೌರ್ಯ ಹಾಗೂ ದಾನವತೆಯನ್ನು ಮೆರೆಯಲಾಗುತ್ತಿದ್ದು, ಇದರ ಮುಂದೆ ಹಸಿವಿನ ಸಾವೂ ಅಷ್ಟು ಕ್ರೂರವಲ್ಲ. ಇನ್ನೇನು ಸಾವಿಗೆ ಒಳಗಾಗುತ್ತದೆ ಎಂಬ ಗೋವನ್ನು ಉಳಿಸುವುದು ಪುಣ್ಯದ ಕಾರ್ಯವಾಗಿದೆೆ. ಕೆಲವು ವರ್ಷದಿಂದ ಚಾಲ್ತಿಯಲ್ಲಿರುವ ಗೋ ಸಂಜೀವಿನಿಗೆ ಮಲೆಮಹದೇಶ್ವರ ಬೆಟ್ಟದ ಕೆಂಪಯ್ಯನ ಹಟ್ಟಿಯಲ್ಲಿ ಚಾಲನೆ ಸಿಗಲಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಹೇಳಿದರು.
ಅವರು ಬುಧವಾರ ಗಿರಿನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಅಭಯ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಹವ್ಯಕ ಮಂಡಲದ ಬೆಟ್ಟಂಪಾಡಿ, ಬೆಳ್ಳಾರೆ, ಚೊಕ್ಕಾಡಿ, ಪಂಜ ವಲಯಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭ ಅವರು ಎಂ.ಫಾರಂ.ನಲ್ಲಿ ಮೊದಲ ಸ್ಥಾನ ಪಡೆದ ಶಿಲ್ಪಾ ಕೆ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ವಿಶೇಷ ಕಾರಣ ಹಾಗೂ ವಿಶೇಷ ಕಾರ್ಯವಾಗಿ ಗೋಸಂಜೀವಿನಿ ಎಂಬ ಶ್ರೇಷ್ಠ ಯೋಜನೆ ಇದೆ. ಮಠದ ವತಿಯಿಂದ ಅನೇಕ ಯೋಜನೆ, ಆಂದೋಲನಗಳು ನಡೆದಿವೆ. ಆದರೆ ಗೋ ಸಂಜೀವಿನಿಗೆ ಸರಿ ಮಿಗಿಲಾದುದು ಯಾವುದೂ ಇಲ್ಲ. ಯಾವ ಗೋವನ್ನು ಕಟುಕರು ಖರೀದಿ ಮಾಡುತ್ತಾರೋ, ಯಾವ ಗೋ ಕಸಾಯಿಖಾನೆ ಖರೀದಿ ಮಾಡುವ ಸಾಧ್ಯತೆ ಇರುತ್ತದೆಯೋ ಆ ಗೋವನ್ನು ಅವರಿಗಿಂತ ಮೊದಲು ಗೋಭಕ್ತರು, ಗೋಪ್ರೇಮಿಗಳು ಖರೀದಿ ಮಾಡುವ ಯೋಜನೆ ಇದಾಗಿದೆ ಎಂದು ಹೇಳಿದರು.
ಅಂದಿಯೂರು ದೇವಾಲಯದ ಗೋವುಗಳ ಜಾತ್ರೆಗೆ ದೊಡ್ಡ ಪ್ರಮಾಣದ ಗೋವುಗಳು ಚಾಮರಾಜ ನಗರ ಜಿಲ್ಲೆಯ ಭಾಗದಿಂದ ಹೋಗುತ್ತಿದೆ. ಹಿಂದೆ ಕೃಷಿಕರಿಂದ ಕೃಷಿಕರೇ ಪಡೆಯುತ್ತಿದ್ದಾಗ ಯಾವುದೇ ಹಾನಿಯಾಗುತ್ತಿರಲಿಲ್ಲ, ಈಗ ದೊಡ್ಡ ಪ್ರಮಾಣದ ಕೊಡುಕೊಳ್ಳುವಿಕೆ ನಡೆಯುತ್ತಿದೆ. ಇದು ಕಟುಕರಿಂದಲೇ ನಿಯಂತ್ರಣವಾಗುತ್ತಿದ್ದು, ಹೆಚ್ಚಿನ ಗೋವುಗಳು ಯಮನ ಊರನ್ನೇ ಸೇರುತ್ತಿವೆ. ಇದನ್ನು ತಿಳಿಯದ ರೈತರು ಅನುಕೂಲ, ಪ್ರತಿಕೂಲಕ್ಕಾಗಿ ಗೋವುಗಳ ಮಾರಾಟಕ್ಕೆ ಮುಂದಾಗುತ್ತಾರೆ ಎಂದರು.
ನೋವಿಗೆ ಪ್ರೀತಿಯ ಉತ್ತರ
ಬೀಫ್‌ಫೆಸ್ಟ್‌ಗೆ ಪ್ರತಿಯಾಗಿ ಹಾಲು ಹಬ್ಬ ಆಚರಿಸಿದ ಮಠ ಅಂದಿಯೂರಿನ ಆಡಿಜಾತ್ರೆಗೆ ಪರ್ಯಾಯವಾಗಿ ಅಭಯ ಜಾತ್ರೆಯನ್ನು ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಹಮ್ಮಿಕೊಂಡಿದೆ. ದೊಡ್ಡ ಮಟ್ಟದಲ್ಲಿ ಕೆಂಪಯ್ಯನ ಹಟ್ಟಿಯಲ್ಲಿ ನಡೆಯುವ ಜಾತ್ರೆಗೆ ಕೃಷಿಕರಿಗೆ, ಗೋಪ್ರೇಮಿ, ಗೋಭಕ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಹಸುಗಳನ್ನು ತುಂಬ ದೂರ ನಡೆಸಿಕೊಂಡು ಹೋಗಬೇಕಾದ ಅಂದಿಯೂರಿಗೆ ಬದಲು ಹತ್ತಿರದಲ್ಲೇ ಮಾರಾಟ ಮಾಡಿ ಎಂಬ ನಿಟ್ಟಿನಲ್ಲಿ ಅ.11ರಿಂದ 13ರವರೆಗೆ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ಹೇಳಿದರು.