ಮನೆಯಲ್ಲಿ ಬಹಳ ಸಮಸ್ಯೆಯಿತ್ತು. ಹಾಗೆ ಎನ್ನುವುದಕಿಂತ ಮಾನಸಿಕ ಕಿರಿಕಿರಿ ಎಂದುಕೊಳ್ಳೋಣ. ದಿನಾಲೂ ಏನಾದರೂ ಒಂದು ಘಟನೆ ನಡೆಯುತ್ತಲೇ ಇತ್ತು. ಕಚೇರಿಗೆ ಮಾನಸಿಕವಾಗಿ ಕುಗ್ಗಿಯೇ ಬರುತ್ತಿದ್ದೆ, ಯಾರಾದರೂ ಮಾತನಾಡಿಸಿದರೂ ನೆಗೆಟಿವ್ ಆಗಿ ಮಾತನಾಡುತ್ತಿದ್ದೆ.
ಇದನ್ನು ನಿತ್ಯವೂ ನೋಡುತ್ತಿದ್ದ ನನ್ನ ಸಹೋದ್ಯೋಗಿಯೊಬ್ಬರು (ಈಗ ಅವರು ನಮ್ಮ ಕಚೇರಿಯಲ್ಲಿಲ್ಲ) ಒಮ್ಮೆ ಸಂಜೆ ಕಾಫಿಗೆ ಕರೆದರು. ನಾನು ಅಳುಕುತ್ತಲೇ ಹೋದೆ. ಅದೂ ಇದೂ ಮಾತನಾಡಿದ ಮೇಲೆ, ನಿಜವಾದ ವಿಷಯಕ್ಕೆ ಬಂದರು. ಯಾಕೆ ನೀವು ನಿತ್ಯವೂ ಬೇಸರದಲ್ಲೇ ಕಚೇರಿಗೆ ಬರುತ್ತೀರಿ, ನೆಗೆಟಿವ್ ಆಗಿ ಮಾತನಾಡುತ್ತೀರಿ. ಕಚೇರಿಯಲ್ಲಿ ಎಲ್ಲರೂ ನೀವು ನೆಗೆಟಿವ್ ಎಂದು ಮಾತನಾಡತೊಡಗಿದ್ದಾರೆ ಎಂದರು.
ಆ ಕ್ಷಣಕ್ಕೆ ಕೊಂಚ ಸಿಟ್ಟು ಬಂದರೂ ಅವರೆದುರು ತೋರಿಸಿಕೊಳ್ಳುವುದು ಸರಿಯಲ್ಲ ಎಂದುಕೊಂಡು ಹಾಗೇನಿಲ್ಲ ಎಂದೆ. ಅವರು ಪಟ್ಟು ಸಡಿಲಿಸಲಿಲ್ಲ. ಅನಿವಾರ್ಯವಾಗಿ ನಾನು, ನನ್ನ ಮನೆಯಲ್ಲಿನ ಸಮಸ್ಯೆಯನ್ನು ಪೂರ್ತಿಯಾಗಿ ವಿವರಿಸಿದೆ. ಅದಕ್ಕೆ ಅವರು ಬಹಳ ಸೌಮ್ಯದಿಂದ, “ನೀವು ಒಮ್ಮೆ ಮಂತ್ರಾಲಯಕ್ಕೆ ಹೋಗಿ ಬನ್ನಿ’ ಎಂದರು. ನನಗೋ ಅವೆಲ್ಲವೂ ಆಗುತ್ತದೆಯೇ ಎಂಬ ಪ್ರಶ್ನೆಗಳಿದ್ದವು.
ಆದರೂ ಕೊನೇ ಹಂತದಲ್ಲಿ ಒಪ್ಪಿಕೊಂಡೆ. ನನ್ನ ಕುಟುಂಬ ಸಮೇತ ವೀಕೆಂಡ್ ಎಂದುಕೊಂಡು ಮಂತ್ರಾಲಯಕ್ಕೆ ಹೋದೆವು. ದೇವರ ದರ್ಶನ ಪಡೆಯುವಾಗ ರಾಘವೇಂದ್ರರಾಯರಿಗೆ ನಮಿಸಿದೆ. ಆ ಕ್ಷಣ ಮನಸ್ಸಿನೊಳಗೆ ಏನೋ ಒಂದು ಹೊಸ ಶಕ್ತಿ ತುಂಬಿದಂತೆನಿಸಿತು. ಮನಸ್ಸಿಗೆ ಸಮಾಧಾನವಾಯಿತು. ಅಂದಿನಿಂದ ವರ್ಷಕ್ಕೊಮ್ಮೆ ಮಂತ್ರಾಲಯಕ್ಕೆ ಹೋಗಿ ಹೊಸ ಚೈತನ್ಯ ತುಂಬಿಕೊಂಡು ಬರುತ್ತೇನೆ.
ತೀರ್ಥ ಕ್ಷೇತ್ರಗಳಲ್ಲಿ ಒಂದು ಬಗೆಯ ಅವ್ಯಕ್ತ ಶಕ್ತಿ ಇರುವುದು ನಿಜ ಎನಿಸಿದೆ.
-ಅನುಪಮಾ, ಭಟ್ಕಳ