Advertisement

ಹೊರಬಂತು ‘ರಾಜಿ’ಹಾಡುಗಳು; ದಾಂಪತ್ಯ ಮಹತ್ವ ಸಾರುವ ಚಿತ್ರ

01:13 PM Apr 21, 2022 | Team Udayavani |

ನಟ ರಾಘವೇಂದ್ರ ರಾಜಕುಮಾರ್‌ ಹಾಗೂ ಪ್ರೀತಿ ಎಸ್‌. ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ “ರಾಜಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

Advertisement

ಇದೇ ವೇಳೆ ಮಾತನಾಡಿದ ರಾಘವೇಂದ್ರ ರಾಜಕುಮಾರ್‌, “ಈ ಸಿನಿಮಾ ನನಗೆ ವಿಶೇಷ. ಏಕೆಂದರೆ, ಇದರ ಮುಹೂರ್ತ ಕಳೆದ ಅಕ್ಟೋಬರ್‌ 30 ರಂದು ನಿಗದಿಯಾಗಿತ್ತು. ನನ್ನ ತಮ್ಮ ಅಪ್ಪು ಸಿನಿಮಾದ ಮುಹೂರ್ತಕ್ಕೆ ಕ್ಲಾಪ್‌ ಮಾಡಲು ಬರಬೇಕಿತ್ತು. ಆದ್ರೆ ಅಕ್ಟೋಬರ್‌ 29 ಅಪ್ಪು ನಮ್ಮನ್ನು ಬಿಟ್ಟು ದೂರಹೋದ. ಅದಾದ ಕೆಲವು ದಿನಗಳ ನಂತರ ಅದೇ ಕಂಠೀರವ ಸ್ಟುಡಿಯೋದ ಅಪ್ಪು ಸಮಾಧಿ ಬಳಿ ಇದರ ಮುಹೂರ್ತ ನಡೆಯಿತು. ಈಗ ಕಾಕತಾಳೀಯವಾಗಿ ಇದೇ 29 ರಂದು ಅಪ್ಪುವಿನ ಏಳನೇ ತಿಂಗಳ ಪುಣ್ಯತಿಥಿಯಂದು ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು.

ಚಿತ್ರದ ಬಗ್ಗೆ ಮಾತನಾಡಿದ ನಟಿ ಮತ್ತು ನಿರ್ದೇಶಕಿ ಪ್ರೀತಿ ಎಸ್‌. ಬಾಬು, “ನಾನು 25 ವರ್ಷಗಳಿಂದ ಪೋಷಕ ಕಲಾವಿದೆಯಾಗಿ ಚಿತ್ರರಂಗದಲ್ಲಿದ್ದೀನಿ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುವುದರ ಜೊತೆಗೆ ರಾಘಣ್ಣ ಅವರೊಂದಿಗೆ ಮುಖ್ಯಪಾತ್ರದಲ್ಲೂ ನಟಿಸಿದ್ದೀನಿ. ಮೊದಲು ಅವರ ಬಳಿ ಕಥೆ ಹೇಳಲು ಭಯವಾಯಿತು. ನಂತರ ಅವರ ಮಾತಿನ ಶೈಲಿ ನೋಡಿ ಭಯವೆಲ್ಲ ದೂರವಾಗಿ, ಅವರ ಮೇಲಿನ ಗೌರವ ಇಮ್ಮಡಿಯಾಯಿತು. ದಾಂಪತ್ಯದ ಮಹತ್ವ ಸಾರುವ ಕಥೆ ಇದು. ರಾಜಿ ಅಂದರೆ ರಾ ಎಂದರೆ ರಾಘವೇಂದ್ರ ರಾಜಕುಮಾರ್‌, ಜಿ ಎಂದರೆ ಜೀವಿತ ಎಂದು. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಿದರು. ಚಿತ್ರದ ಏಳು ಹಾಡುಗಳಿಗೆ ಡಾ. ಹೆಚ್‌. ಎಸ್‌ ವೆಂಕಟೇಶ್‌ ಮೂರ್ತಿ ಸಾಹಿತ್ಯವಿದ್ದು, ಉಪಾಸನ ಮೋಹನ್‌ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ:‘ಬಾನದಾರಿಯಲ್ಲಿ’ ಗಣೇಶ್ ಗೆ ಜೊತೆಯಾದ ರುಕ್ಮಿಣಿ ವಂಸತ್

ಚಿತ್ರ ನಿರ್ಮಾಣವಾದ ಬಗ್ಗೆ ನಿರ್ಮಾಪಕ ಬಸವರಾಜ್‌ ಮೈಸೂರು, ಹಾಗೂ ತಮ್ಮ ಅಭಿನಯದ ಕುರಿತು ಪ್ರತಾಪ್‌ ಸಿಂಹ ಮಾತನಾಡಿದರು. ನಟ ಶ್ರೀನಗರ ಕಿಟ್ಟಿ, ವಿಜಯ ರಾಘವೇಂದ್ರ, ಡಾ. ವಿ. ನಾಗೇಂದ್ರ ಪ್ರಸಾದ್‌, ಕೆಂಪ್ಪಣ್ಣ ಚೆಟ್ಟಿ, ಮುನಿರಾಜು ರಾಮಯ್ಯ, ತಬಲನಾಣಿ , ಸಾಗರ್‌ ಪುರಾಣಿಕ್‌ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next