Advertisement

ರಾಘವೇಂದ್ರ ಭವನ ಮಹಾತ್ಮೆ; ತುರುವೇಕೆರೆಯ ಕುಂದಾಪ್ರ ಹೋಟೆಲ್‌

08:28 PM Jan 19, 2020 | Sriram |

ನಾವು ಯಾವುದಾದ್ರೂ ಪಟ್ಟಣ, ಊರಿಗೆ ಹೋದಾಗ ಇಲ್ಲಿ ನೋಡುವಂಥದ್ದು ಏನಿದೆ, ಶುಚಿ-ರುಚಿಯ ಹೋಟೆಲ್‌ ಯಾವುದಿದೆ ಅಂತ ಕೇಳುತ್ತೇವೆ. ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣಕ್ಕೆ ಬಂದು ಇಲ್ಲಿ ಒಳ್ಳೆ ಹೋಟೆಲ್‌ ಯಾವುದಿದೆ ಅಂಥಾ ಕೇಳಿದ್ರೆ ಎಲ್ಲರೂ ಹೇಳ್ಳೋದು ಗುರುರಾಘವೇಂದ್ರ ಭವನ್‌ ಅಂತಲೇ. ಈ ಹೋಟೆಲ್‌ ದೋಸೆ, ಕಾಯಿ ಚಟ್ನಿ, ಕಾಫಿಗೆ ಫೇಮಸ್‌. ಕುಂದಾಪುರ ತಾಲೂಕು ಕೋಟೇಶ್ವರ ಬಳಿಯ ಬೀಜಾಡಿಯ ಶ್ರೀನಿವಾಸ್‌ರಾವ್‌ ಈ ಹೋಟೆಲ್‌ನ ಸಂಸ್ಥಾಪಕರು. 8ನೇ ವಯಸ್ಸಿಗೆ ಹೋಟೆಲ್‌ ಕೆಲಸಕ್ಕೆ ಸೇರಿಕೊಂಡ ಶ್ರೀನಿವಾಸರಾವ್‌, ಮೊದಲಿಗೆ ಗದಗ್‌ನಲ್ಲಿದ್ದ ತಮ್ಮ ಪರಿಚಯಸ್ಥರ ಹೋಟೆಲ್‌ನಲ್ಲಿ ಕೆಲಸ ಮಾಡಿದರು. ನಂತರ ಕುಣಿಗಲ್‌ನಲ್ಲಿ ಎರಡು ವರ್ಷ, ಚಿತ್ರದುರ್ಗದಲ್ಲಿ 14 ವರ್ಷ ಹೋಟೆಲ್‌ ಕೆಲಸ ಮಾಡಿದರು. ಮದುವೆಯಾದ ನಂತರ ಚಿಕ್ಕಬಳ್ಳಾಪುರದಲ್ಲಿ ತಮ್ಮ ಸೋದರ ಮಾವನ ಜೊತೆ ಸೇರಿ 1948ರಲ್ಲಿ ಶಂಕರ್‌ ಉಲ್ಲಾಸ್‌ ಕಾಫಿ ಕ್ಲಬ್‌ಅನ್ನು ಪ್ರಾರಂಭಿಸಿದ್ದರು.

Advertisement

ಅರವತ್ತು ವರ್ಷ ಹಳೆಯದು
ಈ ಹೋಟೆಲ್‌ 60 ವರ್ಷಗಳಷ್ಟು ಹಳೆಯದು. ಶ್ರೀನಿವಾಸ ರಾವ್‌ ತುರುವೇಕೆರೆಯಲ್ಲಿದ್ದ ಗಜಾನನ ಭವನವನ್ನು 1959ರಲ್ಲಿ ಖರೀದಿ ಮಾಡಿ, ಅದೇ ಹೆಸರಲ್ಲಿ ಹೋಟೆಲ್‌ ಮುಂದುವರಿಸಿದರು. ಇವರಿಗೆ ಪತ್ನಿ ಪದ್ಮಾವತಿ ಸಾಥ್‌ ನೀಡುತ್ತಿದ್ದರು. ಈ ಹೋಟೆಲ್‌ ಇದ್ದ ಕಟ್ಟಡ ಬಿದ್ದುಹೋದಾಗ ತಮ್ಮ ಆರಾಧ್ಯದೈವ ಗುರುರಾಘವೇಂದ್ರ ಸ್ವಾಮಿ ಹೆಸರಲ್ಲಿ ಹೊಸದಾಗಿ ಹೋಟೆಲ್‌ ಪ್ರಾರಂಭಿಸಿದರು. ನಂತರ ಪುತ್ರ ನಾಗರಾಜ್‌ ಹೋಟೆಲ್‌ ಮುನ್ನಡೆಸಿದರು. ಇವರಿಗೆ ಸಹೋದರ ಗೋಪಾಲಕೃಷ್ಣ ಜೊತೆಯಾದರು. ಈಗ ಪುತ್ರ ಗೋಪಾಲಕೃಷ್ಣ, ಮೊಮ್ಮಗ ರಾಘವೇಂದ್ರ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.

ರುಚಿ- ಶುಚಿ ಕಾಪಾಡಿಕೊಂಡಿದೆ
ಹಲವು ಹೋಟೆಲ್‌ಗ‌ಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದ ಶ್ರೀನಿವಾಸರಾವ್‌ ಮಾಡುತ್ತಿದ್ದ ದೋಸೆ, ಇತರೆ ತಿಂಡಿ ತುರುವೇಕೆರೆಯ ಜನರಿಗೆ ರುಚಿಸಿತು. ಕೆಲಸಗಾರರ ಸಮಸ್ಯೆ, ಇತರೆ ಕಾರಣಗಳಿಂದ ಮೂರು ನಾಲ್ಕು ಹೋಟೆಲ್‌ಗ‌ಳು ಮುಚ್ಚಿಹೋದ್ರೂ ಗುರುರಾಘವೇಂದ್ರ ಭವನ ಮಾತ್ರ ತಲೆಮಾರು ಕಳೆದರೂ ತನ್ನ ಹಳೇ ರುಚಿ, ಶುಚಿಯನ್ನು ಕಾಪಾಡಿಕೊಂಡು ಬಂದಿದೆ. ಈಗಲೂ ಬಹುತೇಕ ಮಂದಿ ಸಭೆ ಸಮಾರಂಭಗಳಲ್ಲಿ ಈ ಹೋಟೆಲ್‌ನಲ್ಲಿ ತಿಂಡಿ ತಿಂದದ್ದನ್ನು ನೆನಪು ಮಾಡಿಕೊಳ್ಳುತ್ತಾರೆ.

30 ವರ್ಷಗಳಿಂದ ಜೊತೆಯಿರುವ ಸಿಬ್ಬಂದಿ
ಗುರುರಾಘವೇಂದ್ರ ಭವನದ ರುಚಿ ಇನ್ನೂ ಹಾಗೆ ಉಳಿದಿದೆ ಎಂದರೆ ಅದಕ್ಕೆ ಕಾರಣ ಹೋಟೆಲ್‌ನ ಅಡುಗೆ ಸಿಬ್ಬಂದಿ, ಇಲ್ಲಿನ ಕಾರ್ಮಿಕರು. 30ಕ್ಕೂ ಹೆಚ್ಚು ವರ್ಷಗಳಿಂದ ಅವರು, ಇದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಗುರುರಾಘವೇಂದ್ರ ಭವನದ ಜೊತೆ ತುರುವೇಕೆರೆಯಲ್ಲೇ ದಬ್ಬೇಗಟ್ಟ ರಸ್ತೆಯಲ್ಲಿ ಜನತಾ ಹೋಟೆಲ್‌ ಆರಂಭಿಸಿ, ಗ್ರಾಹಕರಿಗೆ ಶುಚಿ ರುಚಿಯಾದ ತಿಂಡಿಯನ್ನು ನೀಡುತ್ತಿದ್ದಾರೆ.

ವಿಶೇಷ ತಿಂಡಿ:
ಮಸಾಲೆ ದೋಸೆ, ಬೆಣ್ಣೆ ದೋಸೆ ಖಾಲಿ, ಈರುಳ್ಳಿ ದೋಸೆ, ಸೆಟ್‌ ದೋಸೆಯನ್ನು ಕಾಯಿ ಚಟ್ನಿಯಲ್ಲಿ ತಿಂದರೆ ಅದರ ರುಚಿಯೇ ಬೇರೆ. ದರ 15ರೂ.- 40 ರೂ. ಒಳಗೆ ನಿಗದಿ ಪಡಿಸಲಾಗಿದೆ.

Advertisement

ಇತರೆ ತಿಂಡಿ:
ಇಡ್ಲಿ (2ಕ್ಕೆ 20 ರೂ.), ವಡೆ, ಪೂರಿ, ರೈಸ್‌ಬಾತ್‌(30 ರೂ.), ಅನ್ನ ಸಾಂಬಾರ್‌, ರವೆ ಇಡ್ಲಿ, ಸಿಹಿ ತಿಂಡಿ, ಪಕೋಡ, ವಡೆ, ಬಜ್ಜಿ ಸಿಗುತ್ತದೆ. ಫ‌ುಲ್‌ ಮೀಲ್ಸ್‌ ಇಲ್ಲ.

ಹೋಟೆಲ್‌ ಸಮಯ
ಬೆಳಗ್ಗೆ 6.30- ರಾತ್ರಿ 7.30, ಭಾನುವಾರ ರಜಾ

ಹೋಟೆಲ್‌ ವಿಳಾಸ
ವೈ.ಟಿ.ರಸ್ತೆ, ತಾಲೂಕು ಕಚೇರಿ (ಮಿನಿ ವಿಧಾನಸೌಧ) ಎದುರು, ತುರುವೇಕೆರೆ ಪಟ್ಟಣ

– ಭೋಗೇಶ ಆರ್‌. ಮೇಲುಕುಂಟೆ/ ಎಸ್‌. ದೇವರಾಜ್‌

Advertisement

Udayavani is now on Telegram. Click here to join our channel and stay updated with the latest news.

Next