Advertisement

“ರಾಘವೇಂದ್ರ ಸ್ವಾಮಿ ಪವಾಡ!ಅಂದು ಕಾರ್ ಕ್ಲೀನರ್, ಡ್ಯಾನ್ಸರ್, ಇಂದು ಪರೋಪಕಾರಿ, Star ನಟ

09:05 AM Jun 07, 2019 | Nagendra Trasi |

ನಟರಾಗುವುದು, ಖ್ಯಾತರಾಗುವುದು, ಸ್ಟಾರ್ ಪಟ್ಟ ದಕ್ಕುವುದು ಒಮ್ಮೊಮ್ಮೆ ಕಾಕತಾಳೀಯ ಅನ್ನಿಸುವುದರಲ್ಲಿ ತಪ್ಪೆನಿಲ್ಲ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಬಹುತೇಕ ಸಿನಿಮಾರಂಗದಲ್ಲಿ ಯಾವುದೇ ಗಾಡ್ ಫಾದರ್, ಸ್ಟಾರ್ ಕುಟುಂಬದ ಹಿನ್ನೆಲೆ ಇಲ್ಲದೆ ಹಲವಾರು ನಟರು ತಮ್ಮ ಪ್ರತಿಭೆಯಿಂದ ಬೆಳೆದಿದ್ದಾರೆ. ಅಂತಹ ಪಟ್ಟಿಯ ಸಾಲಿನಲ್ಲಿ ಈ ನಟ ಕೂಡಾ ಒಬ್ಬರಾಗಿದ್ದಾರೆ. ಚಿಕ್ಕಂದಿನಲ್ಲಿ ಕಡು ಬಡತನ..ತಾನು ಮುಂದೊಂದು ದಿನ ಸ್ಟಾರ್ ನಟನಾಗುತ್ತೇನೆ ಅಂತ ಕನಸಲ್ಲೂ ಎಣಿಸಿರಲಿಲ್ಲ! ಕಷ್ಟದ ಕಾಲದಲ್ಲಿಯೇ ಕಲಿತ ಡ್ಯಾನ್ಸ್ ಈ ನಟನ ಕೈ ಹಿಡಿದು ಸ್ಟಾರ್ ನಟನ ಸಾಲಿಗೆ ತಂದು ನಿಲ್ಲಿಸಿತ್ತು. ಈ ನಟ ಬೇರೆ ಯಾರೂ ಅಲ್ಲ ರಾಘವ್ ಲಾರೆನ್ಸ್ ಸ್ಯಾಮುವೆಲ್!

Advertisement

ಕಾರ್ ಕ್ಲೀನರ್ ಟು ಸ್ಟಾರ್ ನಟ!

ತಮಿಳಿನ ಖ್ಯಾತ ಫೈಟ್ ಮಾಸ್ಟರ್ ಸೂಪರ್ ಸುಬ್ರಹ್ಮಣ್ಯ ಅವರ ಕಾರ್ ಕ್ಲೀನರ್ ಆಗಿ ಲಾರೆನ್ಸ್ ಕೆಲಸ ಮಾಡುತ್ತಿದ್ದ. ಸಿನಿಮಾ ಸೆಟ್ ನಲ್ಲಿ ಸೂಪರ್ ಸುಬ್ರಹ್ಮಣ್ಯ ಅವರ ಫೈಟ್ ದೃಶ್ಯವನ್ನು ನೋಡಿ ತುಂಬಾನೇ ಪ್ರಭಾವಕ್ಕೊಳಗಾಗಿದ್ದ. ಕಾರು ತೊಳೆಯುತ್ತಲೇ ಡ್ಯಾನ್ಸ್ ಮಾಡುತ್ತಿದ್ದ ಲಾರೆನ್ಸ್ ಗೆ ಡ್ಯಾನ್ಸ್ ಆತನ ಪ್ರಪಂಚವೇ ಆಗಿತ್ತು. ಹೀಗೆ ಒಮ್ಮೆ ಸೂಪರ್ ಸ್ಟಾರ್ ರಜನಿಕಾಂತ್ ಲಾರೆನ್ಸ್ ಡ್ಯಾನ್ಸ್ ನೋಡಿ, ಆತನನ್ನು ಮತ್ತೊಬ್ಬ ಖ್ಯಾತ ಡ್ಯಾನ್ಸರ್, ನಟ ಪ್ರಭುದೇವ್ ನ ಡ್ಯಾನ್ಸ್ ತಂಡಕ್ಕೆ ಸೇರಿಸುತ್ತಾರೆ.

Advertisement

ಬಳಿಕ ಇಂಡಿಯನ್ ಮೈಕೇಲ್ ಜಾಕ್ಸನ್ ಎಂದೇ ಹೆಸರಾಗಿದ್ದ ಪ್ರಭುದೇವ್ ಬಳಿ ಡ್ಯಾನ್ಸ್ ನ ಹಲವಾರು ಮಜಲುಗಳನ್ನು ಲಾರೆನ್ಸ್ ಕಲಿತುಕೊಳ್ಳತೊಡಗಿದ್ದ. 1997ರಲ್ಲಿ ಮೊದಲ ಬಾರಿಗೆ ಲಾರೆನ್ಸ್ ಗೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ “ ಹಿಟ್ಲರ್” ಸಿನಿಮಾದಲ್ಲಿ ಕೋರಿಯೋಗ್ರಫಿ ಮಾಡಲು ಆಹ್ವಾನ ನೀಡಿದ್ದರು. ತೆಲುಗಿನ ಮಾಸ್ಟರ್ ಸಿನಿಮಾದಲ್ಲಿಯೂ ಲಾರೆನ್ಸ್ ಗೆ ಕೋರಿಯೋಗ್ರಾಫ್ ಮಾಡಲು ಚಿರಂಜೀವಿ ಅವಕಾಶ ನೀಡುವ ಮೂಲಕ ಉತ್ತೇಜನ ನೀಡಿದ್ದರು.

ಏತನ್ಮಧ್ಯೆ 1989ರಲ್ಲಿ ಬಿಡುಗಡೆಯಾಗಿದ್ದ ಸಂಸಾರ ಸಂಗೀತಂ ತಮಿಳು ಸಿನಿಮಾದ ಹಾಡಿನ ಡ್ಯಾನ್ಸ್ ನಲ್ಲಿ ಲಾರೆನ್ಸ್ ಕಾಣಿಸಿಕೊಂಡಿದ್ದ. 1991ರ ದೋಂಗಾ ಪೊಲೀಸ್ ಸಿನಿಮಾದ ಹಾಡಿನಲ್ಲೂ ಡ್ಯಾನ್ಸ್ ಮಾಡಿದ್ದರು. 1993ರ ಜಂಟಲ್ ಮ್ಯಾನ್, ತೆಲುಗಿನ ಮುಠಾ ಮೇಸ್ತ್ರಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಡ್ಯಾನ್ಸ್ ಅವಕಾಶ ದೊರಕಿತ್ತು. ಅಲ್ಲಿ ಲಾರೆನ್ಸ್ ಪ್ರತಿಭೆ ಅನಾವರಣಗೊಂಡಿತ್ತು.

1990ರಲ್ಲಿ ನಿರ್ಮಾಪಕ ಟಿವಿಡಿ ಪ್ರಸಾದ್ ಮೊತ್ತ ಮೊದಲು ಸ್ಪೀಡ್ ಡ್ಯಾನ್ಸರ್ ತಮಿಳು ಸಿನಿಮಾದಲ್ಲಿ ಹೀರೋ ಆಗಿ ನಟಿಸುವಂತೆ ಲಾರೆನ್ಸ್ ಗೆ ಆಫರ್ ಕೊಟ್ಟಿದ್ದರು. ಆದರೆ ಆ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೆಚ್ಚು ಸದ್ದು ಮಾಡಲೇ ಇಲ್ಲ. 2001ರಲ್ಲಿ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ನಿರ್ದೇಶನದ 100ನೇ ಸಿನಿಮಾ ಪಾರ್ಥಾಲೆ ಪರಾವಶಂ ಸಿನಿಮಾದಲ್ಲಿ ನಟಿಸುವಂತೆ ಲಾರೆನ್ಸ್ ಗೆ ಅವಕಾಶ ಕೊಟ್ಟಿದ್ದರು.

2002ರಲ್ಲಿ ಅರ್ಬುಧಂ ತಮಿಳು ಸಿನಿಮಾದಲ್ಲಿ ಲಾರೆನ್ಸ್ ಹೀರೋ ಆಗಿ ಎಲ್ಲರ ಗಮನ ಸೆಳೆದು ಬಿಟ್ಟಿದ್ದರು. 2002ರ ಸ್ಟೈಲ್ ಸಿನಿಮಾದಲ್ಲೂ ಲಾರೆನ್ಸ್ ಮಿಂಚಿದ್ದರು. 2004ರಲ್ಲಿ ಮೊದಲ ಬಾರಿಗೆ ಮಾಸ್ ಎಂಬ ತೆಲುಗು ಸಿನಿಮಾವನ್ನು ಲಾರೆನ್ಸ್ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು. ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ್, ಜ್ಯೋತಿಕಾ ನಟಿಸಿದ್ದರು.

2007ರಲ್ಲಿ ತೆರೆಕಂಡ ಮುನಿ ಹಾರರ್ ತಮಿಳು ಸಿನಿಮಾ ಲಾರೆನ್ಸ್ ಗೆ ಸ್ಟಾರ್ ಪಟ್ಟ ತಂದು ಕೊಟ್ಟಿತ್ತು. ಹೀಗೆ ಕಾಂಚನಾ, ರೆಬೆಲ್, ಕಾಂಚನಾ 2, ಮೊಟ್ಟ ಶಿವ, ಕೆಟ್ಟ ಶಿವ, ಶಿವಲಿಂಗ ಸೇರಿದಂತೆ ಸಾಲು, ಸಾಲು ಸಿನಿಮಾಗಳು ಲಾರೆನ್ಸ್ ಗೆ ಭರ್ಜರಿ ಯಶಸ್ಸನ್ನು ತಂದು ಕೊಟ್ಟಿತ್ತು.

ಲಾರೆನ್ಸ್ “ರಾಘವ್” ಆಗಿದ್ದು ರಾಘವೇಂದ್ರ ಸ್ವಾಮಿ ಪವಾಡದಿಂದ!

1976ರಲ್ಲಿ ಚೆನ್ನೈನ ಪೂನಮಲೈನಲ್ಲಿ ಜನಿಸಿದ್ದ ಲಾರೆನ್ಸ್ ಸ್ಯಾಮುಮೆಲ್. ತಾಯಿ ಹೆಸರು ಕಣ್ಮಣಿ, ಇನ್ನುಳಿದಂತೆ ಯಾವುದೇ ವಿವರಗಳು ಲಭ್ಯವಿಲ್ಲ. ಪತ್ನಿ ಲತಾ. ಲಾರೆನ್ಸ್ ದಂಪತಿಗೆ ಒಬ್ಬಳೇ ಮಗಳು ರಾಘವಿ. ಲಾರೆನ್ಸ್ “ರಾಘವ್” ಆಗಿದ್ದರ ಹಿಂದೆ ಪುಟ್ಟದೊಂದು ಕುತೂಹಲಕಾರಿ ಘಟನೆ ಇದೆ.   ಹೌದು ಲಾರೆನ್ಸ್ ಚಿಕ್ಕವನಿದ್ದಾಗ ಬ್ರೈನ್ ಟ್ಯೂಮರ್ ಆಗಿತ್ತಂತೆ. ಇದರಿಂದಾಗಿ ಶಾಲೆಗೆ ಹೋಗಲು ತೊಂದರೆಯಾಗಿತ್ತು. ಈ ಸಂದರ್ಭದಲ್ಲಿ ಬ್ರೈನ್ ಟ್ಯೂಮರ್ ಗುಣಮುಖವಾಗಲಿ ಎಂದು ಮೊರೆ ಹೋಗಿದ್ದು “ರಾಘವೇಂದ್ರ ಸ್ವಾಮಿ” ಪೂಜೆಯಿಂದ. ಕೊನೆಗೆ ಪವಾಡ ಎಂಬಂತೆ ಬ್ರೈನ್ ಟ್ಯೂಮರ್ ಗುಣವಾಗಿತ್ತು. ಬಳಿಕ ಹಿಂದೂ ಧರ್ಮಕ್ಕೆ ಮತಾಂತರವಾದ ಲಾರೆನ್ಸ್, ತನ್ನ ಹೆಸರನ್ನು “ರಾಘವ್ ಲಾರೆನ್ಸ್ “ ಎಂದು ಬದಲಾಯಿಸಿಕೊಂಡಿದ್ದರು. ಅಷ್ಟೇ ಅಲ್ಲ ಚೆನ್ನೈನ ಆವಡಿ-ಅಂಬತ್ತೂರ್ ನಡುವಿನ ತಿರುಮುಲ್ಲೈವಯ್ಯಾಲ್ ಎಂಬಲ್ಲಿ ರಾಘವೇಂದ್ರ ಸ್ವಾಮಿ ಬೃಂದಾವನ ಎಂಬ ದೇವಸ್ಥಾನವನ್ನೂ ರಾಘವ್ ಕಟ್ಟಿಸಿದ್ದಾರೆ!

ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಸೇವೆ:

ತನ್ನ ಬಾಲ್ಯದ ದಿನಗಳ ಕಷ್ಟ, ಅನುಭವಿಸಿದ ನೋವುಗಳನ್ನು ಮರೆಯದ ಲಾರೆನ್ಸ್ ಸಿನಿಮಾದಲ್ಲಿ ಸ್ಟಾರ್ ನಟ ಆದ ನಂತರವೂ ಕೂಡಾ ಸಹಾಯಹಸ್ತ ಚಾಚುವುದನ್ನು ಮರೆಯಲಿಲ್ಲ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಿಧನದ ನಂತರ “ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್” ಅನ್ನು ಸ್ಥಾಪಿಸಿದ್ದರು.

ಸಮಾಜದಲ್ಲಿನ ಬಡವರು, ಕಡು ಬಡವರಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಲಾರೆನ್ಸ್ ಟ್ರಸ್ಟ್ ನೆರವು ನೀಡುತ್ತಿದೆ. ಅದೇ ರೀತಿ ಈಗಾಗಲೇ ನೂರಾರು ಮಕ್ಕಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಟ್ರಸ್ಟ್ ಆರ್ಥಿಕ ಸಹಾಯ ನೀಡುವ ಮೂಲಕ ಜನಾನುರಾಗಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next