ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ, ಅವಳಿ ಕಂದಮ್ಮಗಳು ಮೃತಪಟ್ಟಿದ್ದು, ಮೃತಳ ಸಂಬಂಧಿಕರು, ಸ್ನೇಹಿತರು ಆಸ್ಪತ್ರೆ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ವಿರುಪಾಪೂರ ಗ್ರಾಮದ ನಂದಿನಿ ಎಂಬಾಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ.
ಗಜೇಂದ್ರಗಡ ಪಟ್ಟಣದಲ್ಲಿರುವ ಕಾರೊಡಗಿಮಠ ಆಸ್ಪತ್ರೆಯಲ್ಲಿ ನಂದಿನಿಗೆ ಫೆಬ್ರವರಿ 2ರಂದು ಸಿ-ಸೆಕ್ಷನ್ ಮಾಡಿ ಹೆರಿಗೆ ಮಾಡಿಸಿದ್ದರು. ಆದರೆ, ದುರಾದೃಷ್ಟ ಎಂಬಂತೆ ಹೆರಿಗೆ ಬಳಿಕ ಅವಳಿ -ಜವಳಿ ಮಕ್ಕಳು ಮೃತಪಟ್ಟಿದ್ದವು. ಇದರಿಂದ ನಂದಿನಿ ಹಾಗೂ ಕುಟುಂಬಸ್ಥರು ತೀವ್ರ ನೊಂದಿದ್ದರು.
ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿ ನಂದಿನಿಗೆ ಲೋ ಬಿಪಿ ಆಗಿತ್ತು. ಹೀಗಾಗಿ ಕುಟುಂಬಸ್ಥರು ಬಾಗಲಕೋಟೆಯ ಬಾದಾಮಿ ಖಾಸಗಿ ಆಸ್ಪತ್ರೆಗೆ ರವಾಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ (ಫೆ.5) ನಂದಿನಿ ಮೃತಪಟ್ಟಿದ್ದಾರೆ. ಸಿಜೇರಿಯನ್ ವೇಳೆ ಆಸ್ಪತ್ರೆಯವರು ರಕ್ತದ ವ್ಯವಸ್ಥೆ ಮಾಡದೆ ಹೆರಿಗೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ರಕ್ತ ಕೊರತೆಯಿಂದಲೇ ಬಾಣಂತಿ ಮೃತಪಟ್ಟಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.