ಕಳೆದ ವಾರವಷ್ಟೇ ನಟ ವಿನೋದ್ ಪ್ರಭಾಕರ್ ಅಭಿನಯದ ‘ರಗಡ್’ ಚಿತ್ರ ತೆರೆಗೆ ಬಂದಿದೆ. ಔಟ್ ಆ್ಯಂಡ್ ಔಟ್ ಮಾಸ್ ಎಂಟರ್‌ಟೈನ್ಮೆಂಟ್ ಕಥಾಹಂದರದ “ರಗಡ್’ ಚಿತ್ರ ಬಿಡುಗಡೆಯ ಬಳಿಕ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಇದೇ ವೇಳೆ “ರಗಡ್’ ಚಿತ್ರದ ಬಿಡುಗಡೆಯ ನಂತರ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡಲು ಚಿತ್ರತಂಡ ಪ್ರೇಕ್ಷಕರ ಮುಂದೆ ಬಂದಿತ್ತು.
ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ಮಾಪಕ ಎ. ಅರುಣ್ ಕುಮಾರ್, “ಒಂದು ಒಳ್ಳೆಯ ಚಿತ್ರವನ್ನು ಮಾಡಬೇಕೆಂಬ ಹಲವು ವರ್ಷಗಳ ಕನಸು ಈ ಚಿತ್ರದ ಮೂಲಕ ನನಸಾಗಿದೆ. ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರವನ್ನು ನೋಡಿದವರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಬಿಡುಗಡೆಯಾದ ನಂತರ ನಿಧಾನವಾಗಿ ಚಿತ್ರದ ಗಳಿಕೆಯಲ್ಲೂ ಏರಿಕೆಯಾಗುತ್ತಿದೆ. ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು’ ಎಂದರು.
ನಾಯಕ ವಿನೋದ್ ಪ್ರಭಾಕರ್ ಮಾತನಾಡಿ, “ಕನ್ನಡದಲ್ಲಿ ಮೊದಲ ಬಾರಿಗೆ ಈ ಚಿತ್ರದಲ್ಲಿ 8 ಪ್ಯಾಕ್ಸ್ ಮಾಡುವ ಐಡಿಯಾ ಬಂದಿತ್ತು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಯಿತು. ಚಿತ್ರದ ಸ್ಟಿಲ್ಸ್ ಬಿಡುಗಡೆಯಾದ ನಂತರ ಮುಂಬರುವ “ಫೈಟರ್’ ಸೇರಿದಂತೆ ಕೆಲವು ಚಿತ್ರಗಳ ಪಾತ್ರಗಳಲ್ಲಿ ಅದೇ 8 ಪ್ಯಾಕ್ ಲುಕ್ ಅನ್ನೇ ಮುಂದುವರೆಸುವಂತೆ ಅದರ ನಿರ್ದೇಶಕರು ಹೇಳಿದ್ದಾರೆ. ಚಿತ್ರಕ್ಕಾಗಿ ಹಾಕಿದ ಪರಿಶ್ರಮ ಈಗ ಸಾರ್ಥಕವಾಗಿದೆ. ಮಾಸ್ ಆಡಿಯನ್ಸ್ ಚಿತ್ರವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇಂಥ ಅವಕಾಶವನ್ನು ಕೊಟ್ಟ ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರಕ್ಕೆ ಥ್ಯಾಂಕ್ಸ್’ ಎಂದರು.
ನಿರ್ದೇಶಕ ಶ್ರೀಮಹೇಶ್ ಗೌಡ ಮಾತನಾಡಿ, “ಚಿತ್ರ ಏಕಕಾಲಕ್ಕೆ ಸುಮಾರು 187 ಕೇಂದ್ರಗಳಲ್ಲಿ ಬಿಡುಗಡೆಯಾಗಿತ್ತು. ಅದರಲ್ಲೂ ಬಿ ಮತ್ತು ಸಿ ಸೆಂಟರ್‌ಗಳಲ್ಲಿ ಚಿತ್ರಕ್ಕೆ ಭಾರೀ ರೆಸ್ಪಾನ್ಸ್ ಸಿಗುತ್ತಿದೆ. ಹುಬ್ಬಳ್ಳಿ, ಮಂಡ್ಯ, ಮೈಸೂರು ಹೀಗೆ ಬಿಡುಗಡೆಯಾಗಿರುವ ರಾಜ್ಯದ ಎಲ್ಲಾ ಕೇಂದ್ರಗಳಲ್ಲೂ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇಡೀ ಚಿತ್ರತಂಡದ ಪ್ರಯತ್ನಕ್ಕೆ ಒಳ್ಳೆಯ ಫಲಿತಾಂಶ ಸಿಗುತ್ತಿದೆ. ನಮ್ಮ ಪ್ರಯತ್ನ ಸಾರ್ಥಕವಾಗಿದೆ ಎಂಬ ತೃಪ್ತಿಯಿದೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ನಟ ನಾಗರಾಜ್ ಸಿದ್ಧಿ ಮತ್ತು ಚಿತ್ರದ ಇತರ ತಂತ್ರಜ್ಞರು ಮತ್ತು ಕಲಾವಿದರು ಚಿತ್ರದ ಅನುಭವಗಳು ಮತ್ತು ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.