ಮಡಿಕೇರಿ: ಕಾವೇರಿ ನದಿ ದಡದ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಯಲ್ಲಿ ಸ್ಥಳೀಯರನ್ನು ಕಡೆಗಣಿಸಿ ರಾಫ್ಟಿಂಗ್ ನಡೆಸಲು ಜಿಲ್ಲಾಡಳಿತ ಟೆಂಡರ್ ಕರೆದಿದೆ ಎಂದು ಆರೋಪಿಸಿರುವ ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಸಿ.ಎಲ್. ವಿಶ್ವ, ಮುಂದಿನ ಎರಡು ದಿನಗಳ ಒಳಗಾಗಿ ಟೆಂಡರ್ ಸ್ಥಗಿತಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮತ್ತು ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬಾರೆಯಲ್ಲಿ 16 ಮಂದಿ 60 ರ್ಯಾಫ್ಟರ್‌ಗಳನ್ನು ಇಟ್ಟುಕೊಂಡು ಕಾರ್ಯ
ನಿರ್ವಹಿಸುತ್ತಿದ್ದು, ಈ ರಿವರ್ ರಾಫ್ಟಿಂಗ್ನ್ನು ನಂಬಿಕೊಂಡು 150 ಬಡ ಕುಟುಂಬಗಳು ಬದುಕು ನಡೆಸುತ್ತಿವೆ. ಇದೀಗ ಈ ಎಲ್ಲ ಕುಟುಂಬಗಳ ಬದುಕಿಗೆ ಸಂಕಷ್ಟವನ್ನು ತಂದೊಡ್ಡುವಂತೆ ಜಿಲ್ಲಾಡಳಿತ ರಾಫ್ಟಿಂಗ್ ನಡೆಸುವುದಕ್ಕೆ ಬಹಿರಂಗ ಟೆಂಡರ್ ಕರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದುಬಾರೆಯ ಕಾಲ್ನಡಿಗೆ ಹಾದಿಯನ್ನು ರಸ್ತೆಯನ್ನಾಗಿ ಪರಿವರ್ತಿಸಲು ಅಗತ್ಯವಾದ ಜಾಗವನ್ನು ಅಲ್ಲಿನ ನಿವಾಸಿಗಳು ಒದಗಿಸಿ ನೆರವನ್ನು ನೀಡಿದ್ದಾರೆ. ಸ್ಥಳೀಯರೆ ರಾಫ್ಟಿಂಗ್ಗಳನ್ನು ನಡೆಸುವ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದೀಗ ಬಹಿರಂಗ ಟೆಂಡರ್ ಮೂಲಕ ರ್ಯಾಫ್ಟಿಂಗ್ ನಡೆಸಲು ಮುಂದಾಗಿರುವುದರಿಂದ ಸ್ಥಳೀಯ ಪಾಲಿಗೆ ಸಂಕಷ್ಟ ಎದುರಾಗಿದೆ.
ಪ್ರಸ್ತುತ ದುಬಾರೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ರ್ಯಾಫ್ಟರ್‌ಗಳಿಗೆ ಸಂಬಂಧಿಸಿದಂತೆ ಅಗತ್ಯ ಎಲ್ಲ ಅನುಮತಿಗಳನ್ನು ಪಡೆದುಕೊಂಡಿರು ವುದಲ್ಲದೆ, ಇರುವ 60 ರ್ಯಾಫ್ಟರ್‌ಗಳಿಗೆ ಸಂಬಂಧಿಸಿದಂತೆ ಮಾಸಿಕ ತಲಾ 600 ರೂ. ಗಳಂತೆ 36 ಸಾವಿರ ರೂ.ಗಳನ್ನು ಪಾವತಿಸುತ್ತಿರುವುದಲ್ಲದೆ, ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ 60 ಗೈಡ್‌ಗಳು, ರಕ್ಷಣಾ ಸಿಬಂದಿಗಳನ್ನು ನಾವು ನಿಯುಕ್ತಿಗೊಳಿಸಿ ಕ್ರಮ ಬದ್ಧವಾಗಿ ರಾಫ್ಟಿಂಗ್ ಉದ್ಯಮ ನಡೆಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹೊರಗಿನವರಿಗೆ ರಾಫ್ಟಿಂಗ್ ನಡೆಸಲು ಅನುವು ಮಾಡಿಕೊಡುವ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದೆಂದು ಸಿ.ಎಲ್. ವಿಶ್ವ ತಿಳಿಸಿದರು.
ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮಾವೋಜಿ ದಾಮೋದರ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಲಭ್ಯವಿದ್ದರು, ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುವ ದುಬಾರೆಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಲ್ಲ. ಇದರ ಬದಲಾಗಿ ರಿವರ್ ರಾಫ್ಟಿಂಗ್ ನಡೆಸುವ ಸ್ಥಳೀಯರಿಗೆ ತೊಂದರೆಯನ್ನು ತಂದೊಡ್ಡುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ರಾಫ್ಟಿಂಗ್ಗೆ ಕರೆಯಲಾಗಿ ರುವ ಟೆಂಡರ್‌ನಲ್ಲಿ ಸೂಚಿಸಿರುವ ದಾಖಲೆಗಳನ್ನು ಒದಗಿಸಲು ರಾಫ್ಟಿಂಗ್ ನಡೆಸುತ್ತಿರುವ ಸ್ಥಳೀಯರಿಗೆ ಒಂದು ವರ್ಷದ ಕಾಲಾವಧಿಯನ್ನು ನೀಡಬೇಕು. ಇಲ್ಲವಾದಲ್ಲಿ ಕಾನೂನಿನ ಮೊರೆ ಹೋಗು ವುದಾಗಿ ತಿಳಿಸಿದರು. ಶಿವರಾಂ, ತಳೂರು ಚೇತನ್ ಹಾಗೂ ಕೆ.ಜಿ. ನವೀನ್ ಉಪಸ್ಥಿತರಿದ್ದರು.