ಟಿ. ನರಸೀಪುರ (ಮೈಸೂರು): ಕಾವೇರಿ ನದಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡುವ ವೇಳೆ ತೆಪ್ಪ ಮುಳುಗಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ತಲಕಾಡು ಬಳಿ ನಡೆದಿದೆ.
ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು (28), ಶಶಿಕಲಾ (20) ಮೃತ ದುರ್ದೈವಿಗಳು. ಇವರಿಗೆ ನ.22ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಇದಕ್ಕೂ ಮೊದಲು ಪ್ರಿ ವೆಡ್ಡಿಂಗ್ ಫೋಟೊಶೂಟ್ ಗೆ ಯೋಜನೆ ಮಾಡಿದ್ದರು.
ತಿ.ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡುತ್ತಿದ್ದರು. ಕಾವೇರಿ ನದಿ ಮಧ್ಯೆ ಫೋಟೋ ತೆಗೆಸಿಕೊಳ್ಳಲು ಯೋಜನೆ ಹಾಕಿದ್ದರು. ಮದುವೆ ಹುಡುಗ, ಹುಡುಗಿಗೆ ಒಂದು ತೆಪ್ಪ ಹಾಗೂ ಫೋಟೋಗ್ರಾಫರ್, ಸಂಬಂಧಿಕರು ಮತ್ತೊಂದು ತೆಪ್ಪದಲ್ಲಿ ಕಾವೇರಿ ನದಿಯಲ್ಲಿ ಫೋಟೊಶೂಟ್ ಮಾಡುತ್ತಿದ್ದರು.
ಹರಿಯುವ ನೀರಲ್ಲಿ ತೆಪ್ಪದ ಮೇಲೆ ನಿಂತು ಕ್ಯಾಮಾರಗೆ ಪೋಸ್ ಕೊಡುವ ವೇಳೆಗೆ ತೆಪ್ಪ ಮಗುಚಿದ್ದು ಚಂದ್ರು, ಶಶಿಕಲಾ ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತಾದರೂ ಇಬ್ಬರೂ ಮೃತಪಟ್ಟಿದ್ದಾರೆ.
ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.