ಮೆಲ್ಬರ್ನ್: ವಿಶ್ವದ ಅಗ್ರಮಾನ್ಯ ಟೆನಿಸಿಗ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಆಘಾತಕಾರಿ ಸೋಲನುಭವಿಸಿ ಹೊರಬಿದ್ದಿದ್ದಾರೆ.
ಬುಧವಾರದ ಕ್ವಾರ್ಟರ್ ಫೈನಲ್ ಮುಖಾಮುಖೀಯಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ದಿಟ್ಟ ಹೋರಾಟ ನಡೆಸಿ 7-6 (7-3), 7-6 (7-4), 4-6, 7-6 (8-6) ಅಂತರದಿಂದ ನಡಾಲ್‌ಗೆ ಬಲೆ ಬೀಸುವಲ್ಲಿ ಯಶಸ್ವಿಯಾದರು.
ಶುಕ್ರವಾರದ ಸೆಮಿಫೈನಲ್‌ನಲ್ಲಿ ಡೊಮಿನಿಕ್ ಥೀಮ್ ಜರ್ಮನಿಯ 7ನೇ ಶ್ರೇಯಾಂಕದ ಟೆನಿಸಿಗ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ ಸೆಣಸಲಿದ್ದಾರೆ. ದಿನದ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಜ್ವೆರೇವ್ 1-6, 6-3, 6-4, 6-2ರಿಂದ ಸ್ಟಾನಿಸ್ಲಾಸ್ ವಾವ್ರಿಂಕ ವಿರುದ್ಧ ಮೇಲುಗೈ ಸಾಧಿಸಿದರು.
“ನಾನಿಂದು ನಿಜಕ್ಕೂ ಅದೃಷ್ಟಶಾಲಿ. ಸರಿಯಾದ ಹೊತ್ತಿನಲ್ಲಿ ನನಗಿದು ಕೈ ಹಿಡಿದಿದೆ. ನಡಾಲ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅವರನ್ನು ಸೋಲಿಸಬೇಕಾದರೆ ಅದೃಷ್ಟವೇ ಬೇಕು…’ ಎಂದು ಥೀಮ್ ಪ್ರತಿಕ್ರಿಯಿಸಿದ್ದಾರೆ. ಇದು ನಡಾಲ್ ವಿರುದ್ಧ ಆಡಿದ 14 ಪಂದ್ಯಗಳಲ್ಲಿ ಥೀಮ್ ಸಾಧಿಸಿದ 5ನೇ ಗೆಲುವು. ಇನ್ನೊಂದೆಡೆ ಅಲೆಕ್ಸಾಂಡರ್ ಜ್ವೆರೇವ್ ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಸೈಮಿಫೈನಲ್ ಆಗಿದೆ.
ಮುಗುರುಜಾ-ಹಾಲೆಪ್ ಸೆಮಿಫೈನಲ್ ಸೆಣಸಾಟ
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ವನಿತಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಗಾರ್ಬಿನ್ ಮುಗುರುಜಾ ಮತ್ತು ಸಿಮೋನಾ ಹಾಲೆಪ್ ಸೆಣಸಾಡಲಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಇಬ್ಬರೂ ನೇರ ಸೆಟ್‌ಗಳ ಗೆಲುವು ಸಾಧಿಸಿದರು. ಸ್ಪೇನಿನ ಗಾರ್ಬಿನ್ ಮುಗುರುಜಾ 7-5, 6-3 ಅಂತರದಿಂದ ರಶ್ಯದ ಅನಾಸ್ತಾಸಿಯಾ ಪಾವುÉಚೆಂಕೋವಾ ಅವರನ್ನು ಮಣಿಸಿದರು. ಇನ್ನೊಂದು ಮುಖಾಮುಖೀಯಲ್ಲಿ ರೊಮೇನಿಯಾದ ಸಿಮೋನಾ ಹಾಲೆಪ್ ಎಸ್ತೋನಿಯಾದ ಅನೆಟ್ ಕೊಂಟವೀಟ್ ವಿರುದ್ಧ 6-1, 6-1 ಅಂತರದ ಸುಲಭ ಜಯ ಒಲಿಸಿಕೊಂಡರು.