ಹೊಸದಿಲ್ಲಿ : ಫ್ರಾನ್ಸ್ ಜತೆಗಿನ ರಫೇಲ್ ಫೈಟರ್ ಜೆಟ್ ವಿಮಾನ ಖರೀದಿ ವಹಿವಾಟಿಗೆ ಸಂಬಂಧಿಸಿದ ನಿರ್ಧಾರ ಪ್ರಕ್ರಿಯೆಯ ವಿವರಗಳನ್ನು ತನಗೆ ಮುಚ್ಚಿದ ಲಕೋಟೆಯಲ್ಲಿ ಅಕ್ಟೋಬರ್ 29ರ ಒಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ಆದೇಶಿಸಿತು.
ಆದರೆ ತನಗೆ ರಫೇಲ್ ಖರೀದಿ ದರ ಅಥವಾ ಫೈಟರ್ ಜೆಟ್‌ನ ತಾಂತ್ರಿಕ ವಿವರಗಳು ಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
ಅಂತೆಯೇ ಈ ಸಂಬಂಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅ.31ಕ್ಕೆ ನಿಗದಿಸಿತು.
ರಫೇಲ್ ಫೈಟರ್ ಜೆಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ತಾನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನು ಒಳಗೊಂಡ ಸುಪ್ರೀಂ ಪೀಠ ಹೇಳಿತು.
ಇದಕ್ಕೆ ಮೊದಲು ನಡೆದಿದ್ದ ವಾದದಲ್ಲಿ ಕೇಂದ್ರ ಸರಕಾರ ತಾನು ರಫೇಲ್ ಫೈಟರ್ ಜೆಟ್ ಖರೀದಿ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸುವುದಾಗಿಯೂ, ರಾಜಕೀಯ ಮೈಲೇಜ್ ಪಡೆಯುವುದು ಈ ಪಿಐಎಲ್‌ನ ಹಿಂದಿರುವ ಉದ್ದೇಶವಾಗಿದೆ ಎಂದೂ ಹೇಳಿತು.
ಇಬ್ಬರು ಪ್ರತ್ಯೇಕ ಲಾಯರ್‌ಗಳು ರಫೇಲ್ ಖರೀದಿ ವಹಿವಾಟಿನ ತನಿಖೆಯು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನಡೆಯಬೇಕೆಂದು ಆಗ್ರಹಿಸಿ ಪಿಐಎಲ್ ದಾಖಲಿಸಿದ್ದರು.