ಹೊಸದಿಲ್ಲಿ: ಯಾವುದೇ ಕಾರಣಕ್ಕೂ 36 ರಫೇಲ್ ಯುದ್ಧ ವಿಮಾನಗಳ ದರ ವಿವರ ಬಹಿರಂಗ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟವಾಗಿ ಹೇಳಿದೆ. ಜತೆಗೆ ಸದ್ಯಕ್ಕೆ ರಫೇಲ್ ಯುದ್ಧ ವಿಮಾನಗಳ ದರದ ಬಗ್ಗೆ ಯಾವುದೇ ಚರ್ಚೆಯೂ ಬೇಡ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂಲಕ ದರ ವಿವರ ಬಹಿ ರಂಗಕ್ಕೆ ಸುಪ್ರೀಂ ಕದ ಬಡಿದಿರುವ ಮಾಜಿ ಸಚಿವರಾದ ಅರುಣ್ ಶೌರಿ, ಯಶವಂತ ಸಿನ್ಹಾ ಅವರಿಗೆ ಹಿನ್ನಡೆಯಾಗಿದೆ. ಎರಡು ದೇಶಗಳ ನಡುವೆ ಆಗಿರುವ ಒಪ್ಪಂದದ ಪ್ರಕಾರ, ಈ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ಯುದ್ಧ ವಿಮಾ ನದ ದರ ವಿವರ ಬಹಿರಂಗಗೊಂಡಲ್ಲಿ ವೈರಿಗಳ ಕೈ ಮೇಲಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ಕೇಂದ್ರ ಸರಕಾರದ ಪರ ಕೋರ್ಟ್‌ಗೆ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ತಿಳಿಸಿದ್ದಾರೆ.
ಬುಧವಾರ ಒಟ್ಟಾರೆ 5 ಗಂಟೆಗಳ ಕಾಲ ದರ ಬಹಿರಂಗಕ್ಕೆ ಸಂಬಂಧಿಸಿದಂತೆ ವಾದ- ಪ್ರತಿವಾದ ನಡೆಯಿತು. ಕಡೆಗೆ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಈ ಬಗ್ಗೆ ತನಿಖೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಪು ಪ್ರಕಟಿಸುವುದಾಗಿ ಕಾಯ್ದಿರಿಸಿತು. ಸೋಮವಾರವಷ್ಟೇ ಕೇಂದ್ರ ಸರಕಾರವು ಸಿಜೆಐ ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಒಪ್ಪಂದ ಮತ್ತು ದರದ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿತ್ತು. ಆದರೆ, ಬುಧವಾರದ ವಿಚಾರಣೆ ವೇಳೆ ಈ ವಿವರಗಳನ್ನು ಯಾವುದೇ ಕಾರಣಕ್ಕೂ ಅರ್ಜಿದಾರರಿಗಾಗಲಿ ಅಥವಾ ಸಾರ್ವ ಜನಿಕ ಗೊಳಿಸುವುದಾಗಲಿ ಮಾಡುವಂತಿಲ್ಲ ಎಂದು ಹೇಳಿದೆ. ನನ್ನ ಕಚೇರಿಯಿಂದ ಎಲ್ಲಿ ಮಾಹಿತಿ ಸೋರಿಕೆಯಾಗುತ್ತದೆಯೋ ಎಂಬ ಕಾರಣಕ್ಕಾಗಿ ತಾವೂ ಈ ಮಾಹಿತಿ ಹೊಂದಿಲ್ಲ ಎಂದ ವೇಣುಗೋಪಾಲ್ ಅವರು, ಸಂಸತ್‌ಗೂ ಈ ಬಗ್ಗೆ ಮಾಹಿತಿ ನೀಡಬೇಕಾಗಿಲ್ಲ ಎಂದರು.
ಆದರೆ, ವಕೀಲ ಪ್ರಶಾಂತ್ ಭೂಷಣ್ ಅವರು ವಾದ ಮಂಡಿಸಿ, ಹಿಂದಿನ ಸರ್ಕಾರದ ಅವಧಿಯಲ್ಲಿ 126 ಯುದ್ಧ ವಿಮಾನಗಳನ್ನು ಖರೀದಿ ಮಾಡಲು ಒಪ್ಪಂದ ಮಾಡಿ ಕೊಳ್ಳಲಾಗಿತ್ತು. ಆದರೆ, ಈಗ ಕೇವಲ 36 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆ ಕೇಂದ್ರ ಸರಕಾರವು ತುರ್ತು ನೆಪವನ್ನು ನೀಡಿದೆ. ಹಳೆಯ ಒಪ್ಪಂದವೇ ಇದ್ದಿದ್ದರೆ, 2019ರ ಏಪ್ರಿಲ್ ಹೊತ್ತಿಗೆ 18 ಯುದ್ಧ ವಿಮಾನಗಳು ಬಂದಿರುತ್ತಿದ್ದವು ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸರಕಾರ ವನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್, ಹಳೆಯ ಒಪ್ಪಂದವನ್ನು ಬದಲಾವಣೆ ಮಾಡಿ ದ್ದೇಕೆ ಎಂದು ನ್ಯಾ| ಕೆ.ಎಂ.ಜೋಸೆಫ್ ಪ್ರಶ್ನಿಸಿದರು. ಜತೆಗೆ, ಹಿಂದಿನ ಒಪ್ಪಂದ ಮುರಿಯುವ ಮೊದಲೇ ಹೊಸ ಒಪ್ಪಂದದ ಘೋಷಣೆ ಮಾಡಿದ್ದೂ ಏಕೆ ಎಂದೂ ಕೇಳಿದರು. ಈ ವೇಳೆ ಉತ್ತರಿಸಲು ವೇಣುಗೋಪಾಲ್ ಅವರು ತಡವರಿಸಿ ದರು. ಆಗ ಅಟಾರ್ನಿ ಜನರಲ್ ಸಹಾ ಯಕ್ಕೆ ಬಂದ ಸಿಜೆಐ ರಂಜನ್, ನಿಮ್ಮ ಟಿಪ್ಪಣಿಯ ಪ್ರಕಾರವೇ 2015ರ ಮಾರ್ಚ್ ನಲ್ಲಿ ಒಪ್ಪಂದ ಮುರಿತದ ಪ್ರಕ್ರಿಯೆ ಶುರು ವಾಗಿ, ಜೂನ್‌ನಲ್ಲಿ ಮುಗಿ ಯಿತು ಅಲ್ಲವೇ ಎಂದರು.
ವಿಚಾರಣೆ ವೇಳೆ, ದರ ವಿವರಕ್ಕೆ ಸಂಬಂ ಧಿಸಿದಂತೆ ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್ ಅನ್ನೇ ಪ್ರಶ್ನಿಸಿದ ಅಟಾರ್ನಿ ಜನ ರಲ್ ಕೆ.ಕೆ.ವೇಣುಗೋಪಾಲ್ ಅವರು, ಈ ಸಂಬಂಧ ತಜ್ಞರಷ್ಟೇ ಪರಿಶೀಲನೆ ನಡೆ ಸಲು ಸಾಧ್ಯ. ಕೋರ್ಟ್ ಅಲ್ಲ ಎಂದರು. ಹೀಗಾಗಿ ಮಧ್ಯಾಹ್ನದ ಊಟದ ನಂತರದ ವಿಚಾರಣೆ ವೇಳೆಗೆ ವಾಯುಪಡೆಯ ಮೂವರು ಅಧಿಕಾರಿಗಳನ್ನೂ ಸುಪ್ರೀಂ ಕೋರ್ಟ್ ಕರೆಸಿಕೊಂಡಿತು.