ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಳೆದ ಡಿಸೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಪರಾಮರ್ಶಿಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಮೋದಿ ನೇತೃತ್ವದ ಸರಕಾರ ರಫೇಲ್ ವ್ಯವಹಾರದ ನ್ಯಾಯಾಂಗದ ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾದಂತಾಗಿದೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ ಹೇಳುವುದಾದರೆ ಇಲ್ಲಿಗೇ ಈ ವಿವಾದ ಮುಕ್ತಾಯವಾಗಬೇಕು.
ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ವ್ಯವಹಾರ ಲೋಕಸಭೆ ಚುನಾವಣೆ ಮುಂಚಿತವಾಗಿ ವಿಪಕ್ಷಗಳು ಮಾಡಿದ ಅವ್ಯವಹಾರದ ಆರೋಪಗಳಿಂದಾಗಿ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಸಂಸತ್ತಿನ ಒಳಗೆ ಮತ್ತು ಹೊರಗೆ ವಿಪಕ್ಷಗಳು ಇದನ್ನು ಮೋದಿ ಸರಕಾರದ ವಿರುದ್ಧ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡಿದ್ದವು. ನಿರ್ದಿಷ್ಟವಾಗಿ ಮೋದಿಯನ್ನೇ ಗುರಿ ಮಾಡಿಕೊಂಡು ಈ ಅವ್ಯವಹಾರದ ಆರೋಪ ಮಾಡಲಾಗಿತ್ತು. ಹಗರಣ ರಹಿತ ಸರಕಾರ ಎಂಬ ಹಿರಿಮೆಗೆ ಕಳಂಕ ಹಚ್ಚಬೇಕೆಂದು ಮುಖ್ಯ ವಿಪಕ್ಷವಾಗಿದ್ದ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಕೊನೆಗೂ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ರಫೇಲ್ ವ್ಯವಹಾರದಲ್ಲಿ ಯಾವುದೇ ಅಕ್ರಮ ಅಥವಾ ಭ್ರಷ್ಟಾಚಾರ ನಡೆದಿರುವುದು ಕಾಣಿಸುವುದಿಲ್ಲ ಮತ್ತು ರಕ್ಷಣಾ ಖರೀದಿ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕಳೆದ ಡಿಸೆಂಬರ್‌ನಲ್ಲಿ ತೀರ್ಪು ನೀಡಲಾಗಿತ್ತು. ಅನಂತರ ವಿಪಕ್ಷಗಳು ಈ ತೀರ್ಪನ್ನು ಪರಾಮರ್ಶೆಗೊಳಪಡಿಸಬೇಕೆಂದು ಆಗ್ರಹಿಸಿ ಹಲವು ಅರ್ಜಿಗಳನ್ನು ಸಲ್ಲಿಸಿದ್ದವು. ಈ ಎಲ್ಲ ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಅತಿ ದೊಡ್ಡ ರಕ್ಷಣಾ ಖರೀದಿಗೆ ಇದ್ದ ಅಡ್ಡಿಯನ್ನು ನ್ಯಾಯಾಲಯ ನಿವಾರಿಸಿದೆ.
ಈಗಾಗಲೇ ಒಂದು ರಫೇಲ್ ವಿಮಾನವನ್ನು ಹಸ್ತಾಂತರಿಸುವ ವಿಧಿ ನೆರ ವೇರಿದೆ. ರಫೇಲ್ ಸದ್ಯ ಜಗತ್ತಿನ ಅತ್ಯಂತ ಪ್ರಬಲ ಯುದ್ಧ ವಿಮಾನವಾಗಿದ್ದು, ಸುತ್ತ ಶತ್ರು ರಾಷ್ಟ್ರಗಳಿರುವ ಭಾರತಕ್ಕೆ ಇಂಥ ಯುದ್ಧ ವಿಮಾನದ ಅಗತ್ಯ ತೀರಾ ಇದೆ. ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ನಮ್ಮ ಬಳಿ ರಫೇಲ್ ಏನಾ ದರೂ ಇದ್ದಿದ್ದರೆ ಕಾರ್ಯಾಚರಣೆಯ ಫಲಿತಾಂಶ ಇದಕ್ಕಿಂತಲೂ ಭಿನ್ನವಾಗಿರುತ್ತಿತ್ತು ಎಂದು ದಂಡ ನಾಯಕರೇ ಹೇಳಿದ್ದರು. ಇಂಥ ಪ್ರಬಲ ಅಸ್ತ್ರವೊಂದರ ಖರೀದಿಗೆ ಅಡ್ಡಗಾಲು ಹಾಕಲು ಯತ್ನಿಸಿದ್ದು ಸರಿಯಲ್ಲ. ದೇಶದ ಭದ್ರತೆ ರಾಜಕೀಯ ಅತೀತವಾಗಿದೆ ಎನ್ನುವುದನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕು.
ಇನ್ನು ಈ ಆರೋಪಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ಅದರಲ್ಲೂ ನಿರ್ದಿಷ್ಟವಾಗಿ ಕಾಂಗ್ರೆಸ್‌ನ್ ಅಂದಿನ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಹುರುಳಿಲ್ಲದ ಆರೋಪಗಳೆಲ್ಲ ಈಗ ದೇಶದ ಎದುರು ಬೆತ್ತಲಾಗಿವೆ. ಪ್ರಧಾನಿ ವಿರುದ್ಧ ರಾಹುಲ್ “ಚೌಕಿದಾರ್ ಚೋರ್’ ಅಭಿಯಾನವನ್ನೇ ನಡೆಸಿದ್ದರು. ರಫೇಲ್ ಆರೋಪದ ಹಿಂದೆ ಇದ್ದದ್ದು ದೇಶದ ಹಿತಕ್ಕೆ ಸಂಬಂಧಿಸಿದ ನೈಜ ಕಾಳಜಿಯಲ್ಲ, ಸರಕಾರದ, ಅದರಲ್ಲೂ ಪ್ರಧಾನಿ ವರ್ಚಸ್ಸಿಗೆ ಮಸಿ ಬಳಿದು ರಾಜಕೀಯ ಲಾಭ ಗಳಿಸುವ ವ್ಯವಸ್ಥಿತ ಹುನ್ನಾರ ಮಾತ್ರ ಎನ್ನುವುದು ಈ ತೀರ್ಪಿನಿಂದ ಸ್ಪಷ್ಟವಾಗುತ್ತದೆ. ಆದ ರೂ ವಿಪಕ್ಷಗಳಿಗೆ ಲೋಕಸಭೆ ಚುನಾವಣೆಯಲ್ಲಿ ರಫೇಲ್ ವಿವಾದದಿಂದ ಯಾವ ಲಾಭವೂ ಆಗಲಿಲ್ಲ. ಎನ್‌ಡಿಎ ಮೈತ್ರಿಕೂಟ ಮತ್ತು ಬಿಜೆಪಿ ಹಿಂದಿನ ಅವಧಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮರಳಿ ಅಧಿಕಾರಕ್ಕೇರಿದೆ. ಹುರುಳಿಲ್ಲದ ಆರೋಪಗಳನ್ನು ನಂಬುವಷ್ಟು ಅಮಾಯಕರು ನಾವಲ್ಲ ಎಂದು ಮತದಾರರು ಅಂದೇ ತೀರ್ಪು ನೀಡಿದ್ದಾರೆ. ಮತದಾರರ ತೀರ್ಪಿಗೆ ಸುಪ್ರೀಂ ಕೋರ್ಟಿನಿಂದ ಒಂದು ಅಧಿಕೃತ ಮುದ್ರೆ ಬಿದ್ದಂತಾಗಿದೆ.
ಬೊಫೋರ್ನಿಂದ ಹಿಡಿದು ರಫೇಲ್ ತನಕ ಪ್ರತಿ ರಕ್ಷಣಾ ಖರೀದಿ ವ್ಯವಹಾರವೂ ವಿವಾದಕ್ಕೊಳಗಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ಅಂತಿಮವಾಗಿ ಹಾನಿಯಾಗುವುದು ನಮ್ಮ ಸೇನಾ ಬಲಗಳಿಗೆ. ಚೀನಾ, ರಶ್ಯಾ, ಇಸ್ರೇಲ್‌ನಂಥ ದೇಶಗಳ ಸೇನಾ ಬಲಕ್ಕೆ ಹೋಲಿಸಿದರೆ ನಾವಿನ್ನೂ ಬಹಳ ಹಿಂದೆ ಇದ್ದೇವೆ. ಅದರಲ್ಲೂ ನಮ್ಮ ವಾಯುಪಡೆ ತುರ್ತಾಗಿ ಆಧುನೀಕರಣವನ್ನು ಬೇಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರತಿ ರಕ್ಷಣಾ ಖರೀದಿ ವ್ಯವಹಾರವನ್ನು ರಾಜಕೀಯ ಲಾಭದಾಸೆಗಾಗಿ ವಿವಾದ ಮಾಡಲು ಯತ್ನಿಸುವುದರಿಂದ ನಷ್ಟವಾಗುವುದು ದೇಶಕ್ಕೆ.