ಅಬುಧಾಬಿ: ವಿಶ್ವದ ಅಗ್ರಮಾನ್ಯ ಟೆನಿಸಿಗ ರಫೆಲ್ ನಡಾಲ್ ಅಬುಧಾಬಿಯಲ್ಲಿ ನಡೆದ “ಮುಬಾದಲ ಎಟಿಪಿ ಟೆನಿಸ್’ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಇದರೊಂದಿಗೆ ಅತೀ ಹೆಚ್ಚು 5 ಸಲ ಈ ಪ್ರಶಸ್ತಿ ಜಯಿಸಿದ ದಾಖಲೆ ಸ್ಥಾಪಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ “ಥ್ರಿಲ್ಲಿಂಗ್ ಫೈನಲ್’ನಲ್ಲಿ ಗ್ರೀಕ್‌ನ ಸ್ಟೆಫನಸ್ ಸಿಸಿಪಸ್ ವಿರುದ್ಧ ನಡಾಲ್ 6-7 (3-7), 7-5, 7-6 (7-3) ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿ ಯಾದರು. ಇವರ ಹೋರಾಟ 3 ಗಂಟೆಗಳ ಕಾಲ ಸಾಗಿತು.
ಟೈ-ಬ್ರೇಕರ್‌ಗೆ ವಿಸ್ತರಿಸಲ್ಪಟ್ಟ ಮೊದಲ ಸೆಟ್ ಸಿಸಿಪಸ್ ಪಾಲಾಯಿತು. ದ್ವಿತೀಯ ಸೆಟ್ ಕೂಡ ಗ್ರೀಕ್ ಆಟಗಾರನಿಗೆ ಒಲಿಯುವ ಹಂತದಲ್ಲಿತ್ತು. ಆದರೆ ಅನುಭವಿ ನಡಾಲ್ ಅಮೋಘ ಹೋರಾಟ ಪ್ರದರ್ಶಿಸಿ ಪಂದ್ಯವನ್ನು ಸಮಬಲಕ್ಕೆ ತಂದರು.
ನಿರ್ಣಾಯಕ ಸೆಟ್‌ನಲ್ಲೂ ಸಿಸಿಪಸ್ ಅಪಾಯಕಾರಿಯಾಗಿಯೇ ಗೋಚರಿಸಿದರು. ಆದರೆ ನಡಾಲ್ ಅಷ್ಟೇ ಜಾಣ್ಮೆಯ ಆಟವಾಡಿ ಮೇಲುಗೈ ಸಾಧಿಸಿದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ವಿಶ್ವದ ನಂ.2 ಟೆನಿಸಿಗ ಜೊಕೋವಿಕ್ 7-5, 6-3ರಿಂದ ರಶ್ಯದ ಕರೆನ್ ಕಶನೋವ್‌ಗೆ ಸೋಲುಣಿಸಿ ತೃತೀಯ ಸ್ಥಾನಿಯಾದರು.