Advertisement

ರಫೆಲ್‌ ನಡಾಲ್‌ಗೆ 11ನೇ ಬಾರ್ಸಿಲೋನಾ ಪ್ರಶಸ್ತಿ

10:55 AM May 01, 2018 | Team Udayavani |

ಬಾರ್ಸಿಲೋನಾ: ಗ್ರೀಕ್‌ನ ಯುವ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ಅವರನ್ನು 6-2, 6-1 ನೇರ ಸೆಟ್‌ಗಳಲ್ಲಿ ಮಣಿಸಿದ ಟೆನಿಸ್‌ ದೈತ್ಯ ರಫೆಲ್‌ ನಡಾಲ್‌ 11ನೇ ಸಲ “ಬಾರ್ಸಿಲೋನಾ ಎಟಿಪಿ ಟೆನಿಸ್‌’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದು ವಿಶ್ವದ ನಂ.1 ಟೆನಿಸಿಗ ರಫೆಲ್‌ ನಡಾಲ್‌ ಅವರ ಟೆನಿಸ್‌ ಬಾಳ್ವೆಯ 55ನೇ ಆವೆಯಂಗಳದ ಪ್ರಶಸ್ತಿಯಾಗಿದ್ದು, ಕ್ಲೇ-ಕೋರ್ಟ್‌ನಲ್ಲಿ ತಮ್ಮ ಸತತ ಗೆಲುವಿನ ಓಟವನ್ನು 46 ಸೆಟ್‌ಗಳಿಗೆ ವಿಸ್ತರಿಸಿದರು. ಕಳೆದ ವಾರ 11ನೇ ಮಾಂಟೆ ಕಾರ್ಲೊ ಟೆನಿಸ್‌ ಪ್ರಶಸ್ತಿ ಜಯಿಸುವ ಹಾದಿಯಲ್ಲೂ ನಡಾಲ್‌ ಒಂದೂ ಸೆಟ್‌ ಕಳೆದುಕೊಂಡಿರಲಿಲ್ಲ.

Advertisement

ಆವೆಯಂಗಳದಲ್ಲಿ  401 ಗೆಲುವು
ರಫೆಲ್‌ ನಡಾಲ್‌ ಎತ್ತಿ ಹಿಡಿದ 77ನೇ ಟೆನಿಸ್‌ ಪ್ರಶಸ್ತಿ ಇದಾಗಿದ್ದು, ಆವೆಯಂಗಳದ ಗೆಲುವಿನ ದಾಖಲೆಯನ್ನು 401ನೇ ಪಂದ್ಯಕ್ಕೆ ವಿಸ್ತರಿಸಿದರು. ಸೋತದ್ದು 35 ಪಂದ್ಯ ಮಾತ್ರ. ಈ ಸಂದರ್ಭದಲ್ಲಿ ನಡಾಲ್‌ ಅವರ ಎಲ್ಲ 11 ಬಾರ್ಸಿಲೋನಾ ಪ್ರಶಸ್ತಿಗಳ ವೀಡಿಯೋವನ್ನು ಬಿಡುಗಡೆ ಮಾಡಲಾಯಿತು. “ಸಿಸಿಪಸ್‌, ನಿಮ್ಮ ಪಾಲಿಗೆ ಇದೊಂದು ಸ್ಮರಣೀಯ ವಾರವಾಗಿದೆ. ನಿಮಗೆ ಉಜ್ವಲ ಭವಿಷ್ಯ ವಿದೆ. ಎಲ್ಲ ಯಶಸ್ಸು ನಿಮ್ಮದಾಗಲಿ…’ ಎಂದು ನಡಾಲ್‌ ಗ್ರೀಕ್‌ ಟೆನಿಸಿಗನನ್ನು ಹಾರೈಸಿದ್ದಾರೆ.

ಗ್ರೀಕ್‌ ದೇಶದ ಸಾಧಕ
19ರ ಹರೆಯದ, ವಿಶ್ವ ರ್‍ಯಾಂಕಿಂಗ್‌ನಲ್ಲಿ 63ನೇ ಸ್ಥಾನದಲ್ಲಿರುವ ಸಿಸಿಪಸ್‌ 1973ರ ಬಳಿಕ ಎಟಿಪಿ ಕೂಟವೊಂದರ ಫೈನಲ್‌ ತಲುಪಿದ ಗ್ರೀಕ್‌ನ ಮೊದಲ ಟೆನಿಸಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು. 2005ರ ಬಳಿಕ ಬಾರ್ಸಿಲೋನಾ ಕೂಟದ ಫೈನಲ್‌ನಲ್ಲಿ ಕಾಣಿಸಿಕೊಂಡ ಕಿರಿಯ ಟೆನಿಸಿಗನೂ ಹೌದು. ಅಂದು ಈ ದಾಖಲೆ ನಿರ್ಮಿಸಿದವರು ಬೇರೆ ಯಾರೂ ಅಲ್ಲ, ರಫೆಲ್‌ ನಡಾಲ್‌!

Advertisement

Udayavani is now on Telegram. Click here to join our channel and stay updated with the latest news.

Next