Advertisement

ಇಂದಿನಿಂದ ರೊಲ್ಯಾಂಡ್‌ ಗ್ಯಾರೋಸ್‌ ಸಮರ ವಿಶ್ವಾಸದಲ್ಲಿ ರಫೆಲ್‌ ನಡಾಲ್‌

06:35 AM May 27, 2018 | Team Udayavani |

ಪ್ಯಾರಿಸ್‌: ರವಿವಾರ ಇತ್ತ ಭಾರತದಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ತೆರೆ ಸರಿಯುತ್ತಿದ್ದಂತೆಯೇ ಅತ್ತ ದೂರದ ಪ್ಯಾರಿಸ್‌ನಲ್ಲಿ ಫ್ರೆಂಚ್‌ ಓಪನ್‌ ರ್ಯಾಕೆಟ್‌ ಸಮರಕ್ಕೆ ಚಾಲನೆ ಲಭಿಸಿರುತ್ತದೆ. ಕ್ರೀಡಾಭಿಮಾನಿಗಳು ನಿಧಾನವಾಗಿ ಕ್ರಿಕೆಟ್‌ನಿಂದ ಟೆನಿಸ್‌ನತ್ತ ತಮ್ಮ ಕುತೂಹಲವನ್ನು ವರ್ಗಾಯಿಸಿಕೊಳ್ಳುವುದು ಅನಿವಾರ್ಯ!

Advertisement

ಆವೆಯಂಗಳದ ಈ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಮ್‌ ಸಮರವೆಂದೊಡನೆ ನೆನಪಾಗುವವರು ಸ್ಪೇನಿನ ಟೆನಿಸ್‌ ದೈತ್ಯ ರಫೆಲ್‌ ನಡಾಲ್‌. ಮರಳಿ ವಿಶ್ವದ ನಂಬರ್‌ ವನ್‌ ಟೆನಿಸಿಗನಾಗಿ ಮೂಡಿಬಂದಿರುವ ನಡಾಲ್‌ ಒಟ್ಟು 10 ಸಲ ಇಲ್ಲಿ ಕಿರೀಟವೇರಿಸಿಕೊಂಡಿದ್ದು, ಈ ಬಾರಿ 11ನೇ ಪ್ರಶಸ್ತಿಯ ವಿಶ್ವಾಸದಲ್ಲಿದ್ದಾರೆ. ಅನುಭವಿ ಆಟಗಾರ ರೋಜರ್‌ ಫೆಡರರ್‌ ಗೈರಾದುದರಿಂದ, ಜೊಕೋವಿಕ್‌ ಫಾರ್ಮ್ನಲ್ಲಿ ಇಲ್ಲದುದರಿಂದ ಇಲ್ಲಿ ನಡಾಲ್‌ ಅವರನ್ನು ತಡೆಯುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ರೋಮ್‌ ಗೆಲುವು ಸ್ಫೂರ್ತಿ
ಕಳೆದ ಮ್ಯಾಡ್ರಿಡ್‌ ಓಪನ್‌ನಲ್ಲಿ ಡೊಮಿನಿಕ್‌ ಥೀಮ್‌ಗೆ ಶರಣಾದರೂ ಅನಂತರದ ರೋಮ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು ನಡಾಲ್‌ ಪಾಲಿನ ಹೆಗ್ಗಳಿಕೆ. “ರೋಮ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದೆ. ಇದು ಪ್ಯಾರಿಸ್‌ ಹೋರಾಟಕ್ಕೆ ಸ್ಫೂರ್ತಿಯಾಗಲಿದೆ. ಇಲ್ಲಿ 11ನೇ ಪ್ರಶಸ್ತಿ ನನ್ನ ಗುರಿ’ ಎಂಬುದಾಗಿ ನಡಾಲ್‌ ಹೇಳಿದ್ದಾರೆ. 

ಕಳೆದ 14 ವರ್ಷಗಳ ಅವಧಿಯಲ್ಲಿ 11 ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿದ ನಡಾಲ್‌, ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ಆಡಿದ 81 ಪಂದ್ಯಗಳಲ್ಲಿ ಕೇವಲ ಎರಡರಲ್ಲಷ್ಟೇ ಸೋತಿದ್ದಾರೆ. ಇದು ಆವೆಯಂಗಳದಲ್ಲಿ ನಡಾಲ್‌ ಅವರ ಪ್ರಭುತ್ವವನ್ನು ಸಾರುತ್ತದೆ.

ರವಿವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್‌ ಉಕ್ರೇನಿನ ಅಲೆಕ್ಸಾಂಡರ್‌ ಡೊಲ್ಗೊಪೊಲೋವ್‌ ಅವರನ್ನು ಎದುರಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next