ಪ್ಯಾರಿಸ್: ಆವೇ ಅಂಗಣದ ರಾಜ ಸ್ಪೇನ್‌ನ ರಫೆಲ್ ನಡಾಲ್ ರವಿವಾರ ನಡೆಯುವ ಫ್ರೆಂಚ್ ಓಪನ್ ಟೆನಿಸ್ ಕೂಟದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನಾರ್ವೆಯ ಎಂಟನೇ ಶ್ರೇಯಾಂಕದ ಕಾಸ್ಪರ್ ರೂಡ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಈ ವರ್ಷದ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ನಡಾಲ್ ಅವರು ಫೈನಲಿಗೇರಿದ ಹಾದಿಯಲ್ಲಿ ಜೊಕೋವಿಕ್ ಅವರನ್ನು ಕ್ವಾರ್ಟರ್‌ಫೈನಲ್ ಮತ್ತು ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದ್ದರು. ಫೈನಲ್‌ನಲ್ಲಿ ಗೆದ್ದರೆ ಅವರು ಫ್ರೆಂಚ್ ಓಪನ್‌ನಲ್ಲಿ 14ನೇ ಪ್ರಶಸ್ತಿ ಜಯಿಸಿದಂತಾಗುತ್ತದೆ.
2005ರ ಬಳಿಕ ಅವರು ಇಲ್ಲಿ ನಾಲ್ಕು ಬಾರಿ ಬಿಟ್ಟರೆ ಉಳಿದ ಸಂದರ್ಭಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ನಡಾಲ್ ಒಟ್ಟಾರೆ 21 ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿ ಜಯಿಸಿದ್ದಾರೆ.
ಗ್ರ್ಯಾನ್ ಸ್ಲಾಮ್ ಕೂಟದ ಫೈನಲಿಗೇರಿದ ನಾರ್ವೆಯ ಮೊದಲ ಆಟಗಾರ ಎಂಬ ಖ್ಯಾತಿಯ ರೂಡ್ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ ಸೆಮಿಫೈನಲ್ ಹೋರಾಟದಲ್ಲಿ 2014ರ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್ ಅವರನ್ನು 3-6, 6-4, 6-2, 6-2 ಸೆಟ್‌ಗಳಿಂದ ಸೋಲಿಸಿದ್ದರು.
23ರ ಹರೆಯದ ರೂಡ್ ಇದೇ ಮೊದಲ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಫೈನಲಿಗೇರಿದ್ದಾರೆ. ಈ ಹಿಂದೆ ಅವರು ಯಾವುದೇ ಪ್ರಮುಖ ಕೂಟದ ನಾಲ್ಕನೇ ಸುತ್ತು ದಾಟಿರಲಿಲ್ಲ. ಅವರ ತಂದೆಯೂ ವೃತ್ತಿಪರ ಟೆನಿಸ್ ಆಟಗಾರರಾಗದ್ದು 1991ರಿಂದ 2001ರ ವರೆಗೆ ಆಡಿದ್ದರು.
ರೂಡ್ ಆವೇ ಅಂಗಣದಲ್ಲಿ ಉತ್ತಮ ನಿರ್ವಹಣೆ ದಾಖ ಲಿಸಿದ್ದಾರೆ,. 2020ರಿಂದ ಆವೇ ಅಂಗಣದಲ್ಲಿ 66 ಪಂದ್ಯಗಳನ್ನು ಆಡಿದ್ದು ಏಳು ಪ್ರಶಸ್ತಿ ಗೆದ್ದಿದ್ದಾರೆ. ಅವರೀಗ ಆವೇ ಅಂಗಣದಲ್ಲಿ ಅತ್ಯಂತ ಕಠಿನ ಪರೀಕ್ಷೆ ಎದುರಿಸುತ್ತಿದ್ದಾರೆ. ಅದು ಕೂಡ ಸ್ವತಃ ಅವರು ದೇವರಂತೆ ಪೂಜಿಸುತ್ತಿರುವ ನಡಾಲ್ ಅವರ ವಿರುದ್ಧವೇ. ರೂಡ್ ಅವರು ಸ್ಪೇನ್‌ನಲ್ಲಿರುವ ನಡಾಲ್ ಅವರ ಟೆನಿಸ್ ಅಕಾಡೆಮಿಯಲ್ಲಿಯೇ ಅಭ್ಯಾಸ ನಡೆಸಿದ್ದರು.