Advertisement
ಕರ್ನಾಟಕದಲ್ಲಿ ಸಿಟಿ ಸ್ಕ್ಯಾನರ್ ಹೊಂದಿದ್ದ ಮೊತ್ತಮೊದಲನೆಯ ಮತ್ತು ಪ್ಯಾಕ್ಸ್ ವ್ಯವಸ್ಥೆಯನ್ನು ಹೊಂದಿದ್ದ ದಕ್ಷಿಣ ಭಾರತದ ಎರಡನೆಯ ಘಟಕ ಅದಾಗಿತ್ತು. ಆ ಬಳಿಕ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಆವಶ್ಯಕತೆಗಳನ್ನು ಪೂರೈಸಲು ಹಾಗೂ ರೋಗಿಗಳ ಚಿಕಿತ್ಸೆಯ ಅಗತ್ಯಗಳನ್ನು ಈಡೇರಿಸುವಲ್ಲಿ ಅಲ್ಲಿಂದೀಚೆಗೆ ಈ ವಿಭಾಗವು ಗರಿಷ್ಠ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸುತ್ತ ಬಂದಿದೆ. ಪ್ರಸ್ತುತ ನಾವಿಲ್ಲಿ ಸ್ನಾತಕೋತ್ತರ ಕೋರ್ಸ್ ಆಗಿರುವ ಎಂಡಿ ರೇಡಿಯೋ ಡಯಾಗ್ನಸಿಸ್ ಒದಗಿಸುತ್ತಿದ್ದೇವೆ. ಇದಲ್ಲದೆ, ವೈದ್ಯಕೀಯ ಶಾಸ್ತ್ರದ ವಿವಿಧ ಶಾಖೆಗಳನ್ನು ಒಳಗೊಂಡ ಬಹು ವಿಭಾಗೀಯ ಅಧ್ಯಯನಗಳಲ್ಲಿ ಪಾಲುಗೊಳ್ಳುತ್ತಿದ್ದೇವೆ. ವಿಭಾಗವು ಅನೇಕ ಸಂಶೋಧನ ಚಟುವಟಿಕೆಗಳು, ಶೈಕ್ಷಣಿಕ ಉಪಕ್ರಮಗಳು, ಅಂತರ್ ವಿಭಾಗೀಯ ಬೋಧನೆಗಳು ಮತ್ತು ಪಾಲುದಾರಿಕೆಗಳಲ್ಲಿ ಕೂಡ ಭಾಗಿಯಾಗುತ್ತಿದೆ. ಮೆಡಿಕಲ್ ಇಮೇಜ್ ಪ್ರೊಸೆಸಿಂಗ್‌ನಲ್ಲಿ ಫಿಲಿಪ್ಸ್ ನಂತಹ ಕಂಪೆನಿಗಳ ಜತೆಗೆ ಶೈಕ್ಷಣಿಕ- ಸಂಶೋಧನ ಒಪ್ಪಂದವನ್ನು ಕೂಡ ನಾವು ಹೊಂದಿದ್ದೇವೆ.
Related Articles
Advertisement
ಕೋವಿಡ್-19 ಕಾಲಘಟ್ಟದಲ್ಲಿ ರೇಡಿಯಾಲಜಿ ವಿಭಾಗದ ಸಿಬಂದಿ ಮತ್ತು ವಿದ್ಯಾರ್ಥಿಗಳು ಅಮೂಲ್ಯ ಸಹಾಯ ಮತ್ತು ನೆರವು ಒದಗಿಸಿದರು. ಕಳೆದ ಎರಡು ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಬಿಕ್ಕಟ್ಟು ನಿಭಾವಣೆಯಲ್ಲಿ ನಮ್ಮ ವಿಭಾಗವು ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದೆ. ರೋಗಿ ಹೊರೆ ಹೆಚ್ಚಳವನ್ನು ಕಡಿಮೆ ಮಾಡುವುದಕ್ಕಾಗಿ ನಾವು ಕೋವಿಡ್ ಐಸಿಯು ಪಾಳಿಗಳನ್ನು ಕೂಡ ನಿರ್ವಹಿಸಿದ್ದೇವೆ. ಕೋವಿಡ್-19 ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಭಾಗಿಯಾದ ಕೆಲವೇ ಪ್ರಾಥಮಿಕ ಸ್ಪೆಶಾಲಿಟಿಗಳಲ್ಲಿ ನಮ್ಮದು ಕೂಡ ಒಂದಾಗಿತ್ತು. ಎಲ್ಲ ಆರೋಗ್ಯ ಸೇವಾ ವೃತ್ತಿಪರರು ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿರುವಂತೆಯೇ ರೇಡಿಯೋಗ್ರಾಫರ್‌ಗಳು ಮತ್ತು ತಂತ್ರಜ್ಞರು ಕೂಡ ಪಿಪಿಇ ಕಿಟ್ ಧರಿಸಿ, ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತ ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡರು.
ಮಣಿಪಾಲ ಕೆಎಂಸಿಯ ಶಾಖೆಯಾಗಿರುವ ಉಡುಪಿ ಟಿಎಂಎ ಪೈ ಆಸ್ಪತ್ರೆಯು ಉಡುಪಿ ಜಿಲ್ಲೆಯ ಎಲ್ಲ ಕೋವಿಡ್-19 ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ಒದಗಿಸುವ ಕರ್ನಾಟಕ ಸರಕಾರದ ವಿನಂತಿಗೆ ಒಪ್ಪಿಕೊಂಡಿತ್ತು. ನಮ್ಮ ವೈದ್ಯರು ಮತ್ತು ರೇಡಿಯೋಗ್ರಾಫರ್‌ಗಳು ಟಿಎಂಎ ಪೈ ಆಸ್ಪತ್ರೆಯಲ್ಲಿ ನಿಯಮಿತವಾಗಿ ಕರ್ತವ್ಯ ನಿರ್ವಹಣೆಗೆ ನಿಯೋಜನೆಗೊಂಡು ರೋಗಿ- ಆರೋಗ್ಯ ಸೇವಾ ಸಿಬಂದಿಯ ಅನುಪಾತ ಕುಸಿಯದಂತೆ ಸಹಕರಿಸಿದರು.ಕೋವಿಡ್-19 ಸಾಂಕ್ರಾಮಿಕದ ದ್ವಿತೀಯ ಅಲೆಯ ಸಂದರ್ಭದಲ್ಲಿ ತಲೆದೋರಿದ್ದ ಮ್ಯುಕೋರ್ಮೈಕೋಸಿಸ್ (ಕಪ್ಪು ಫಂಗಸ್) ಸಮಸ್ಯೆಯನ್ನು ನಿಭಾಯಿಸಿ ಚಿಕಿತ್ಸೆ ಒದಗಿಸುವಲ್ಲಿ ಕೂಡ ರೇಡಿಯೋಲಜಿ ವಿಭಾಗದ ನೆರವು ಅತ್ಯುಪಯುಕ್ತ ಎನಿಸಿದ್ದು ನಮ್ಮ ವಿಭಾಗದ ಕಿರೀಟಕ್ಕೆ ಮಕುಟಪ್ರಾಯವಾಗಿದೆ. ನಮ್ಮ ವಿದ್ಯಾರ್ಥಿಗಳು ಮತ್ತು ತಜ್ಞರ ಶೈಕ್ಷಣಿಕ ಮತ್ತು ಸಹಶೈಕ್ಷಣಿಕ ಕೌಶಲಗಳನ್ನು ಪೋಷಿಸುವ ಮೂಲಕ ಅವರ ಸಮಗ್ರ ಬೆಳವಣಿಗೆಗೆ ಕಾರಣವಾಗುವುದರಲ್ಲಿ ನಮ್ಮ ವಿಭಾಗವು ನಂಬಿಕೆ ಇರಿಸಿಕೊಂಡಿದೆ. ಇದಕ್ಕೆ ಅನುಗುಣವಾಗಿ ನಮ್ಮ ವಿಭಾಗವು ವಿದ್ಯಾರ್ಥಿಗಳು ಮತ್ತು ವೈದ್ಯರ ಶೈಕ್ಷಣಿಕ ಮತ್ತು ಇತರ ಆಸಕ್ತಿಗಳಿಗೆ ಸಂಬಂಧಿಸಿದ ವಿವಿಧ ಬಗೆಯ ಬೋಧನ ತರಗತಿಗಳನ್ನು ಆಯೋಜಿಸುತ್ತ ಬಂದಿದೆ. ಸೆಮಿನಾರ್‌ಗಳು, ಕ್ವಿಜ್ ಕಾರ್ಯಕ್ರಮಗಳು, ಉಪನ್ಯಾಸಗಳು ಮತ್ತು ಸಿಎಂಇಗಳು ಇದರಲ್ಲಿ ಸೇರಿವೆ. ಇವುಗಳನ್ನು ಆಫ್ಲೈನ್ ಮತ್ತು ಆನ್‌ಲೈನ್- ಎರಡೂ ವಿಧಾನಗಳಲ್ಲಿ; ಆಗಾಗ ಅಂತರ್‌ವಿಭಾಗೀಯ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇವೆಲ್ಲವುಗಳಿಂದಾಗಿ ಅತ್ಯುತ್ತಮ ರೇಡಿಯಾಲಜಿ ವೈದ್ಯರಗಳನ್ನು ಹೊಂದಿರುವುದು ನಮಗೆ ಸಾಧ್ಯವಾಗಿದೆ. ರೋಗಿಗಳ ಆಸ್ಪತ್ರೆ ವಾಸ ಅವಧಿಯನ್ನು ಕಡಿಮೆ ಮಾಡಿ ಗುಣ ಹೊಂದುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸುವಲ್ಲಿ ನಾವು ಸತತ ಶ್ರಮ ವಹಿಸುತ್ತಿದ್ದೇವೆ. -ಡಾ| ಚೇತನ್‌ಕುಮಾರ್ ಎಂ.
ಅಸಿಸ್ಟೆಂಟ್ ಪ್ರೊಫೆಸರ್, ರೇಡಿಯೋಡಯಾಗ್ನಸಿಸ್ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ