Advertisement

ವಿಕಿರಣ ಶಾಸ್ತ್ರ ವಿಪುಲ ಅವಕಾಶ

09:57 AM Mar 12, 2020 | mahesh |

ಶಿಕ್ಷಣ ಕ್ಷೇತ್ರ ಇಂದು ಸಾಕಷ್ಟು ಬೆಳೆದಿದೆ. ಹಿಂದೆಲ್ಲ ಬೆರಳೆಣಿಕೆ ಕೋರ್ಸ್‌ಗಳಿದ್ದರೆ ಇಂದು ಬಹಳಷ್ಟು ಕೋರ್ಸ್‌ಗಳಿವೆ. ಕೋರ್ಸ್‌ಗಳ ಆಯ್ಕೆ ಜತೆಗೆ ಉದ್ಯೋಗಾವಕಾಶವೂ ಬಹಳಷ್ಟಿದೆ. ರೇಡಿಯೋಲಜಿ ಅಥವಾ ವಿಕಿರಣಶಾಸ್ತ್ರ ಕೋರ್ಸ್‌ ಗಳತ್ತ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗುತ್ತಿದೆ. ಅನೇಕ ಕಾಲೇಜುಗಳು ಈ ಕೋರ್ಸ್‌ ಅನ್ನು ಆರಂಭಿಸಿವೆ.

Advertisement

ವೈದ್ಯಕೀಯ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಕಾಲೇಜುಗಳಲ್ಲಿ ಹಲವಾರು ಹೊಸ ಕೋರ್ಸ್‌ಗಳಿಗೆ ಬೇಡಿಕೆ ಆರಂಭವಾಗಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ವಿಕಿರಣಶಾಸ್ತ್ರ (ರೇಡಿಯೋಲಜಿ) ಕಲಿಕೆಯತ್ತ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಅದರಂತೆಯೇ ಕಲಿತ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ಒದಗಿಬರುತ್ತಿವೆ.

ವಿಕಿರಣಶಾಸ್ತ್ರ ಎಂಬುವುದು ವಿಜ್ಞಾನ ಕ್ಷೇತ್ರದ ಒಂದು ಭಾಗವಾಗಿದೆ. ಇದರಲ್ಲಿ ವಿಜ್ಞಾನಿಗಳು ಮಾನವನ ಶರೀರದ ಒಳಭಾಗವನ್ನು ವಿವಿಧ ಕಿರಣಗಳಿಂದ ವೀಕ್ಷಿಸಲು ಕ್ಷ-ಕಿರಣಗಳನ್ನು ಬಳಸುತ್ತಾರೆ. ಕ್ಷ -ಕಿರಣದ ಮುಖೇನ ದೊರೆತ ಮಾಹಿತಿಯನ್ನು ರೋಗಿಯ ರೋಗವನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆಯ ಕೋರ್ಸ್‌ ಬಗ್ಗೆ ಚಿಕಿತ್ಸಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ರೇಡಿಯೋಲಜಿಸ್ಟ್‌ ಬಳಸಿಕೊಳ್ಳಲಾಗುತ್ತದೆ. ರೋಗ ನಿರ್ಣಯಕ್ಕೆ ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚುವ ಕಾರ್ಯದಲ್ಲಿ ವಿಕಿರಣಶಾಸ್ತ್ರಜ್ಞರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಎಕ್ಸ್‌ರೇ, ಅಲ್ಟ್ರಾಸೌಂಡ್‌, ಸಿಟಿ ಮತ್ತು ಎಂಆರ್‌ಐನಲ್ಲೂ ಪರಿಣಿತರಾಗುತ್ತಾರೆ.

ವಿಕಿರಣ ಶಾಸ್ತ್ರಜ್ಞರಾಗಲು ಪದವಿಯನ್ನು ಪೂರ್ಣಗೊಳಿಸಿ, ಯಾವುದಾದರೂ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಬಳಿಕ ಇಂಟರ್ನ್ಶಿಫ್‌ ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲದೆ ರಾಜ್ಯಮಟ್ಟದ ಪರವಾನಿಗೆ ಪರೀಕ್ಷೆಯನೂ¡ ಬರೆದಿರಬೇಕು. ರೇಡಿಯೋಲಜಿ ಕಲಿಯಲು ಆಸಕ್ತಿ ಇರುವ ಮಂದಿ ವೈದ್ಯಕೀಯವಾಗಿ ಡಾಕ್ಟರ್‌ ಆಫ್‌ ಮೆಡಿಸಿನ್‌ (ಎಂಡಿ) ಪದವಿ, ಆಸ್ಟಿಯೋಪಥಿಕ್‌ ಮೆಡಿಸಿನ್‌ ( ಡಿಒಎಂ) ಪದವಿಯನ್ನು ಪಡೆಯಲು ಅವಕಾಶವಿದೆ. ಮೊದಲ ಎರಡು ವರ್ಷಗಳ ಕಾಲ ಅಂಗರಚನಾ ಶಾಸ್ತ್ರ, ಜೀವ ರಾಸಾಯನಿಕ, ಸುಧಾರಿತ ಭೌತ್ತಶಾಸ್ತ್ರ ಮತ್ತು ಔಷಧೀಯ ಅಧ್ಯಯನದ ಜತೆಗೆ ಪ್ರಯೋಗಾಲಯಗಳಲ್ಲಿ ಕಲಿಯಲಾಗುತ್ತದೆ. ಇದರ ಜತೆಗೆ ರೋಗ ನಿರ್ಣಯಕಗಳನ್ನು ಯಾವ ರೀತಿಯಲ್ಲಿ ಪರೀಕ್ಷೆ ಮಾಡುವುದು ಎಂಬುವುದರ ಕಲಿಕೆಯೂ ನಡೆಯುತ್ತದೆ.

ಕೋರ್ಸ್‌ಗಳು
ಇತ್ತೀಚಿನ ದಿನಗಳಲ್ಲಿ ಡಿಪ್ಲೊಮಾ ಇನ್‌ ರೇಡಿಯೋಗ್ರಫಿ ಆ್ಯಂಡ್‌ ರೇಡಿಯೋಥೆರಪಿ, ಡಿಪ್ಲೊಮಾ ಇನ್‌ ರೇಡಿಯೊ-ಡಯಾಗ್ನಾಸ್ಟಿಕ್‌ ಟೆಕ್ನಾಲಜಿ ಕೋರ್ಸ್‌ ಕೂಡ ಈ ಪಟ್ಟಿಯಲ್ಲಿ ಸೇರಿವೆ. ಅದಲ್ಲದೆ, ಸರ್ಟಿಫಿಕೇಟ್‌ ಕೋರ್ಸ್‌ ಆದಂತಹ ರೇಡಿಯೋಥೆರಫಿ, ರೇಡಿಯೋಲಜಿ ಅಸಿಸ್ಟೆಂಟ್‌, ರೇಡಿಯೋಥೆರಫಿ ಡಯಾಗ್ನಾಸ್ಟಿಕ್‌ ಕೋರ್ಸ್‌ ಕೂಡ ಕೆಲವೊಂದು ಕಾಲೇಜುಗಳಲ್ಲಿ ಲಭ್ಯವಿದೆ.

Advertisement

ವಿಕಿರಣಶಾಸ್ತ್ರ (ರೇಡಿಯೋಲಜಿ) ಕಲಿತವರು ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಹೊರರೋಗಿ ಕೇಂದ್ರಗಳಲ್ಲಿ ರೋಗ ನಿರ್ಣಾಯಕ ಪತ್ತೆ ಹಚ್ಚಲು ಕೆಲಸ ನಿರ್ವಹಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಬೆಳವಣಿಗೆಯಾಗುತ್ತಿದ್ದು, ಇಮೇಜಿಂಗ್‌ ಅಧ್ಯಯನದಲ್ಲೂ ಕಾರ್ಯನಿರ್ವಹಿಸುವವರು ಕೆಲವರಿದ್ದಾರೆ.ಅಷ್ಟೇ ಅಲ್ಲದೆ, ಅರೆಕಾಲಿಕವಾಗಿಯೂ ಕಾರ್ಯನಿರ್ವಹಿಸಲು ಅವಕಾಶವಿದೆ.

ಕಾಲೇಜುಗಳು
ರೇಡಿಯೋಲಜಿ ಕಲಿಕೆಗೆ ಮಂಗಳೂರಿನ ಕೆಎಂಸಿ ಮೆಡಿಕಲ್‌ ಕಾಲೇಜು, ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು ವೆಲ್ಲೂರು, ಸೈಂಟ್‌ ಜೋನ್ಸ್‌ ಮೆಡಿಕಲ್‌ ಕಾಲೇಜು ಬೆಂಗಳೂರು, ಆಲ್‌ ಇಂಡಿಯಾ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಹೊಸದಿಲ್ಲಿ, ಎಂಎಸ್‌ ರಾಮಯ್ಯ ಮೆಡಿಕಲ್‌ ಕಾಲೇಜು ಬೆಂಗಳೂರು, ಬಿಎಂಸಿಆರ್‌ಐ ಬೆಂಗಳೂರು ಸೇರಿದಂತೆ ಕೆಲವೊಂದು ಕಾಲೇಜುಗಳಲ್ಲಿ ಈ ಕೋರ್ಸ್‌ ಲಭ್ಯವಿದೆ. ಕಾಲೇಜುಗಳನ್ನು ಹೊಂದಿಕೊಂಡು ಶುಲ್ಕ ಲಭ್ಯವಿದೆ. ಸಾಮಾನ್ಯವಾಗಿ 2 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗೆ ಇದೆ. ವಿಕಿರಣ ಶಾಸ್ತ್ರ ಕಲಿತ ವಿದ್ಯಾರ್ಥಿಗೆ ಹೊಸತದರಲ್ಲಿ ಸುಮಾರು 15 ಸಾವಿರ ರೂ.ಗಳಿಂದ ಸಂಬಳ ಆರಂಭವಾಗುತ್ತದೆ.

ಅಪಾರ ಅವಕಾಶ
ವಿಕಿರಣಶಾಸ್ತ್ರ ಕ್ಷೇತ್ರದಲ್ಲಿ ವಿದೇಶದಲ್ಲಿಯೂ ವಿಸ್ತಾರವಾದ ಉದ್ಯೋಗವಕಾಶಗಳಿವೆ. ನರ್ಸಿಂಗ್‌ ಹೋಂಗಳು, ಆಸ್ಪತ್ರೆಗಳು, ರೋಗ ನಿರ್ಣಯ ಕೇಂದ್ರಗಳು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಂತಹ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ರೇಡಿಯೋಗ್ರಾಫರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ, ವಿಕಿರಣಶಾಸ್ತ್ರ ತಂತ್ರಜ್ಞರು, ಸಹಾಯಕ, ವಿಕಿರಣಶಾಸ್ತ್ರಜ್ಞ, ವಿಕಿರಣ ತಂತ್ರಜ್ಞ/ರೇಡಿಯೋಗ್ರಾಫರ್‌, ವಿಕಿರಣಶಾಸ್ತ್ರ ಶುಶ್ರೂಶಕಿ, ಅಲ್ಟ್ರಾಸೌಂಡ್‌ ತಂತ್ರಜ್ಞ/ರೋಗನಿರ್ಣಯ ವೈದ್ಯಕೀಯ ಸೋನೋಗ್ರಾಫರ್‌, ಎಂಆರ್‌ಐ ತಂತ್ರಜ್ಞ, ಸಿಟಿ ಟೆಕ್‌, ಸಿಎಟಿ ಸ್ಕ್ಯಾನ್‌ ಟೆಕ್ನಾಲಜಿಸ್ಟ್‌, ಸಿಟಿ ಸ್ಕ್ಯಾನ್‌ ಟೆಕ್ನಾಲಜಿಸ್ಟ್‌ ಆಗಿಯೂ ಗುರುತಿಸಕೊಳ್ಳಲು ಅವಕಾಶವಿದೆ.

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next