Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಾನುಲಿ ಪಾಠ

06:00 AM Jan 14, 2018 | |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಜ.16ರಿಂದ ಫೆ.28ರ ವರೆಗೆ ಪ್ರತಿದಿನ ಮಧ್ಯಾಹ್ನ ರೇಡಿಯೋ ಮೂಲಕ ಪರೀಕ್ಷೆಯ ಪೂರ್ವ ಸಿದ್ಧತೆ ಪಾಠ ನಡೆಯಲಿದೆ.

Advertisement

ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ದಿನ ರೇಡಿಯೋ ಪ್ರಶ್ನೋತ್ತರ ಕಾರ್ಯಕ್ರಮ ನಡೆಯುತ್ತಿತ್ತು.  ಇಲಾಖೆಯ ಅಧಿಕಾರಿಗಳು, ವಿಷಯ ತಜ್ಞರು  ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಆದರೆ, ಈ ವರ್ಷದ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆವಾಗಿದ್ದು ರೇಡಿಯೋ ಮೂಲಕ ವಿದ್ಯಾರ್ಥಿಗಳಿಗೆ ದಿನದಲ್ಲಿ ಅರ್ಧಗಂಟೆ ಪಾಠ ಮಾಡಿಸಲು ರಾಜ್ಯ ಶಿಕ್ಷಣ ಸಂಶೋಧನೆ  ಮತ್ತು ತರಬೇತಿ ಇಲಾಖೆ ಮುಂದಾಗಿದೆ.

ಮಂಗಳೂರು, ಬೆಂಗಳೂರು, ಧಾರವಾಡ ಸೇರಿ ರಾಜ್ಯದ 14 ಆಕಾಶವಾಣಿ ಕೇಂದ್ರದ ಮೂಲಕ ಎಸ್‌ಎಸ್‌ಎಲ್‌ಸಿ ಪಾಸಿಂಗ್‌ ಪ್ಯಾಕೇಜ್‌ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದಕ್ಕಾಗಿ ರೇಡಿಯೋ ಇಲ್ಲದ ಶಾಲೆಗಳಲ್ಲಿ ಒಂದು ಸಾವಿರ ರೂ. ಮಿತಿಯಲ್ಲಿ ಹೊಸ ರೇಡಿಯೋ ಖರೀದಿಸುವಂತೆಯೂ ಸೂಚನೆ ನೀಡಲಾಗಿದೆ.

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಹೆಚ್ಚಿಸುವ ಹಾಗೂ ಕಠಿಣ ವಿಷಯವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥೈಸುವ ಉದ್ದೇಶದಿಂದ ರೇಡಿಯೋ ಪಾಠ ಮಾಡಿಸಲು ಉದ್ದೇಶಿಸಿದ್ದು, ಇದಕ್ಕಾಗಿ ವಿಷಯ ತಜ್ಞರ ಸಹಕಾರದಿಂದ ಪಠ್ಯಕ್ರಮ ಸಿದ್ಧಪಡಿಸಲಾಗಿದೆ.ಯಾವ ವಾರ ಯಾವ ವಿಷಯದ ಬೋಧನೆ ಇರುತ್ತದೆ ಎಂಬುದನ್ನು ಇಲಾಖೆಯಿಂದಲೇ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ.  ಇದು ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗೆ ಸೀಮಿತವಾಗಿರದೆ ಅನುದಾನ ರಹಿತ ಶಾಲೆಗಳಿಗೂ ಉಪಯೋಗ ಪಡೆಯುವಂತೆ ಸೂಚನೆ ನೀಡಲಾಗಿದೆ.

Advertisement

ರೇಡಿಯೋ ಪಠ್ಯಕ್ರಮ
ಗಣಿತದಲ್ಲಿ ಗಣಗಳ ಮೇಲಿನ ಕ್ರಿಯೆ, ವಾಸ್ತವ ಸಂಖ್ಯೆಗಳು, ಶ್ರೇಣಿಗಳು, ಕ್ರಮ ಯೋಜನೆ ಮತ್ತು ವಿಕಲ್ಪಗಳು, ಸಂಖ್ಯಾಶಾಸ್ತ್ರ, ಕರಣಿಗಳು, ಬಹುಪದೋಕ್ತಿಗಳು, ವರ್ಗ ಸಮೀಕರಣ, ವೃತ್ತಗಳು, ಪೈಥಾಗೋರಸ್‌ ಪ್ರಮಯಗಳು, ತ್ರಿಕೋನಮಿತಿ  ಹಾಗೂ ರೇಖಾ ಗಣಿತ ಒಳಗೊಂಡಂತೆ ಗಣಿತ ಎಲ್ಲಾ ಆಯಾಮವನ್ನು ನಿರ್ದಿಷ್ಟ ದಿನದೊಳಗೆ ಹೇಳಿಕೊಡಲಾಗುತ್ತದೆ.

ವಿಜ್ಞಾನ ವಿಷಯವಾಗಿ ಶಕ್ತಿಯ ಪರ್ಯಾಯ ಆಕರಗಳು, ಪರಿಸರದ ಸಮಸ್ಯೆ, ಧಾತುಗಳ ಆವರ್ತನೀಯ ವರ್ಗಿಕರಣ, ಸೂಕ್ಷ್ಮಜೀವಿಗಳಿಂದ ಬರುವ ರೋಗಗಳು, ಸಸ್ಯ ಮತ್ತು ಪ್ರಾಣಿಗಳ ಅಂಗಾಂಶ, ಚಲನೆಯ ವಿಧಗಳು, ಉಷ್ಣ ಇಂಜಿನ್‌, ರಸಾಯನಶಾಸ್ತ್ರ, ಲೋಹಗಳು ಮತ್ತು ತಳಿ ಅಭಿವೃದ್ಧಿ ಸೇರಿ ವಿಜ್ಞಾನದ ಎಲ್ಲಾ ಅಂಶಗಳನ್ನು ಕ್ರೋಢೀಕರಿಸಿ, ಪರೀಕ್ಷೆಗೆ ಸುಲಭವಾಗುವಂತೆ ಕಲಿಸಿಕೊಡಲಾಗುತ್ತದೆ.

ಸಮಾಜ ವಿಜ್ಞಾನ ವಿಷಯದಲ್ಲಿ ಭಾರತಕ್ಕೆ ಯುರೋಪಿಯನ್ನರ ಆಗಮನ, ಜನಪದ ಚರಿತ್ರೆ, ಭಾರತದಲ್ಲಿ ಬ್ರಿಟಿಷರ ಆಡಳಿತ, ಸಾಮಾಜಿಕ ಧಾರ್ಮಿಕ ಸುಧಾರಣೆಗಳು, ಸ್ವಾತಂತ್ರ ಹೋರಾಟ, ಸ್ವಾತಂತ್ರೊéàತ್ತರ ಭಾರತ, 20ನೇ ಶತಮಾನದ ರಾಜಕೀಯ ಆಯಾಮ, ಸಾಮಾಜಿಕ ಮತ್ತು ಆರ್ಥಿಕ ಜೀವನ ಕಲಿಸಿಕೊಡಲಾಗುತ್ತದೆ.

ಇಂಗ್ಲಿಷ್‌ ಪಠ್ಯಕ್ರಮದಲ್ಲಿ ಇಂಗ್ಲಿಷ್‌ ಗ್ರಾಮರ್‌, ಸಪ್ಲಿಮೆಂಟರಿ ರೀಡಿಂಗ್‌ ಸೇರಿದಂತೆ ವಿವಿಧ ಪಾಠದ ಕೆಲವೊಂದು ಪ್ರಮುಖ ಅಂಶವನ್ನು ಪರಿಣಾಮಕಾರಿಯಾಗಿ ಕಲಿಸಿಕೊಡಲಾಗುವುದು ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ರೇಡಿಯೋ ಖರೀದಿಗೆ ಸೂಚನೆ:
ಎಸ್‌ಎಸ್‌ಎಲ್‌ಸಿ  ವಿದ್ಯಾರ್ಥಿಗಳಿಗೆ ಜ.16ರಿಂದ ಪ್ರತಿದಿನ ಮಧ್ಯಾಹ್ನ 2.35ರಿಂದ 3 ಗಂಟೆಯ ತನಕ ರೇಡಿಯೋ ಪಾಠ ನಡೆಯಲಿದೆ. ಎಲ್ಲಾ ಶಾಲೆಗಳು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ರೇಡಿಯೋ ಇಲ್ಲದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ಸಾವಿರ ರೂ. ಮೌಲ್ಯದ ಒಂದು ರೇಡಿಯೋ ಖರೀದಿಗೆ ಇಲಾಖೆಯಿಂದ ನಿರ್ದೇಶಿಸಲಾಗಿದೆ.

ರೇಡಿಯೋ ಪಾಠಕ್ಕಾಗಿ ತಜ್ಞರ ತಂಡವನ್ನು ರಚನೆ ಮಾಡಲಾಗಿದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್‌ ಪಠ್ಯ ಮುಗಿದ ನಂತರ ಪ್ರಥಮ ಮತ್ತು ತೃತೀಯ ಭಾಷೆಯ ವಿಷಯದ ಕೆಲವು ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ.
-ಫಿಲೋಮಿನಾ ಲೋಬೋ, ನಿರ್ದೇಶಕಿ, ಪ್ರೌಢ ಶಿಕ್ಷಣ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next