Advertisement

ದೇವತೆಯಾದ ರಾಧಿಕಾ…!

09:20 AM Sep 24, 2019 | Lakshmi GovindaRaju |

“ಅಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ. ಇತ್ತು. ಅದೀಗ ನೆರವೇರಿದೆ…’ ಇದು ರಾಧಿಕಾ ಅವರ ಖುಷಿಯ ಮಾತು. ಹೌದು, ರಾಧಿಕಾ ಅವರಿಗೆ ತೆಲುಗಿನ “ಅರುಂಧತಿ’ ಚಿತ್ರದಲ್ಲಿ ನಟಿ ಅನುಷ್ಕಾ ನಿರ್ವಹಿಸಿದ್ದ ರೀತಿಯ ಪಾತ್ರ ಮಾಡಬೇಕು ಅಂತ ಬಹಳ ದಿನದಿಂದಲೂ ಅವರ ಆಸೆ ಮತ್ತು ಕನಸಾಗಿತ್ತು. ಅದೀಗ ನೆರವೇರಿದ ಖುಷಿ ಅವರದು. ಅವರು “ದಮಯಂತಿ’ ಸಿನಿಮಾದಲ್ಲಿ ವಿಶೇಷ ಪಾತ್ರದ ಮೂಲಕ ಗಮನಸೆಳೆಯಲಿದ್ದಾರೆ.

Advertisement

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಚಿತ್ರದ ಟೀಸರ್‌ ಕೂಡ ಹೊರಬಂದಿದೆ. ಸಿನಿಮಾದ ಟೀಸರ್‌ ನೋಡಿದವರು ಮೆಚ್ಚಿಕೊಂಡಿದ್ದಾರೆ. ಸ್ವತಃ ರಾಧಿಕಾ ಅವರಿಗೇ ಆ ಚಿತ್ರದ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲವೂ ಇದೆ. ಇಷ್ಟು ದಿನಗಳ ಕಾಲ ಹಲವು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ, “ದಮಯಂತಿ’ ಸಿನಿಮಾ ಮೂಲಕ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೇ ಹೇಳುವಂತೆ, “ನಾನು ಒಂದೊಳ್ಳೆಯ ಕಥೆ ಇರುವ ಚಿತ್ರದಲ್ಲಿ ನೆನಪಲ್ಲುಳಿಯುವಂತಹ ಪಾತ್ರ ಮಾಡಬೇಕು ಎಂದು ಆಸೆ ಪಟ್ಟಿದ್ದೆ.

ಅದು “ದಮಯಂತಿ’ ಮೂಲಕ ಈಡೇರಿದೆ. ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಚಿತ್ರ ಮಾಡಿದ್ದಾರೆ. ನನ್ನ ಮಗಳು ಹಾಗು ಅಣ್ಣನ ಮಕ್ಕಳು ನನ್ನ ಗೆಟಪ್‌ ನೋಡಿದ ಬಳಿಕ ಹತ್ತಿರ ಬರಲು ಭಯಪಡುತ್ತಿದ್ದಾರೆ. ಅಷ್ಟೊಂದು ಎಫೆಕ್ಟ್ ಆಗಿರುವಂತಹ ಪಾತ್ರವದು. ಅದನ್ನು ಸಿನಿಮಾದಲ್ಲೇ ನೋಡಿದರೆ, ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತೆ ಅನ್ನುವುದು ಗೊತ್ತಾಗುತ್ತೆ. ನಾನಿಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನು, ಈ ಚಿತ್ರದಲ್ಲಿ “ಭಜರಂಗಿ’ ಲೋಕಿ ಮುಖ್ಯ ಪಾತ್ರ ಮಾಡಿದ್ದಾರೆ. ಸಿನಿಮಾ ರಿಲೀಸ್‌ ನಂತರ ಅವರಿಗೆ ನಿಜಕ್ಕೂ ಒಳ್ಳೆಯ ಬ್ರೇಕ್‌ ಸಿಗಲಿದೆ’ ಎಂಬುದು ಅವರ ಮಾತು.

ನವರಸನ್‌ ಈ ಚಿತ್ರದ ನಿರ್ದೇಶಕರು. ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರೀಕರಣ ಸಮಯದಲ್ಲಿದ್ದ ಅವರಿಗೆ ಈ ಚಿತ್ರದ ಒನ್‌ಲೈನ್‌ ಹುಟ್ಟುಕೊಂಡಿದೆ. ಆಗಲೇ ಅವರು ಶೀರ್ಷಿಕೆ ಪಕ್ಕಾ ಮಾಡಿ, ನೋಂದಣಿ ಮಾಡಿಸಿ, ರಾಧಿಕಾ ಅವರಿಗೆ ಕಥೆ ಹೇಳಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡ ರಾಧಿಕಾ ಅವರು ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಈ ಕುರಿತು ಹೇಳುವ ನವರಸನ್‌, “ಕಥೆಯಲ್ಲಿ ರಾಧಿಮಾ ಮೇಡಮ್‌ ಕೊಂಚ ಬದಲಾವಣೆ ಬಯಸಿದ್ದರು. ಅದನ್ನು ಸರಿಪಡಿಸಿಕೊಂಡು ಚಿತ್ರ ಮಾಡಿದ್ದೇವೆ. ಒಂದು ಊರಲ್ಲಿ ದೇವತೆ ಇದ್ದಾಗ, ದುಷ್ಟ ಶಕ್ತಿಗಳೆಲ್ಲಾ ಹೇಗೆ ಓಡಿ ಹೋಗುತ್ತವೆ ಎಂಬ ಕಥೆ ಇಲ್ಲಿದೆ.

ಕನ್ನಡಕ್ಕೊಂದು ಹೊಸ ಬಗೆಯ ಚಿತ್ರ ಇದಾಗಲಿದೆ ಕನ್ನಡ ಸೇರಿದಂತೆ ತೆಲುಗು, ತುಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತಯಾರಾಗಿದೆ’ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ತಬಲನಾಣಿ, ಕೆಂಪೇಗೌಡ ಅವರು ನಟಿಸಿದ್ದು, ಚಿತ್ರೀಕರಣದ ಅನುಭವ ಹಂಚಿಕೊಂಡರು. ಉಳಿದಂತೆ “ದಮಯಂತಿ’ ಚಿತ್ರದಲ್ಲಿ ಬಲ ರಾಜವಾಡಿ, ಅನುಷಾ ರೈ, ವೀಣಾಸುಂದರ್‌, ಬೇಬಿ ಮಿಲನ, ಶರಣ್‌ ನಟಿಸಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ಎಸ್‌.ಗಣೇಶ್‌ನಾರಾಯಣ್‌ ಸಂಗೀತವಿದೆ. ಪಿ.ಕೆ.ಹೆಚ್‌.ದಾಸ್‌ ಛಾಯಾಗ್ರಹಣವಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ನವೆಂಬರ್‌ನಲಿ ಚಿತ್ರ ಬಿಡುಗಡೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next